bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Daniel 6
Daniel 6
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 7 →
1
ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ರಾಜ್ಯದ ಆಯಾ ಭಾಗಗಳ ಮೇಲೆ ನೂರಿಪ್ಪತ್ತು ಮಂದಿ ದೇಶಾಧಿಪತಿಗಳನ್ನೂ
2
ರಾಜನಿಗೆ ನಷ್ಟವಾಗದಂತೆ ಆ ದೇಶಾಧಿಪತಿಗಳ ಮೇಲೆ ಅವರಿಂದ ಲೆಕ್ಕ ತೆಗೆದುಕೊಳ್ಳುವ ಮೂವರು ಮುಖ್ಯಾಧಿಕಾರಿಗಳನ್ನೂ ನೇವಿುಸಬೇಕೆಂದು ನಿಶ್ಚಯಿಸಿಕೊಂಡನು; ಆ ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನು.
3
ಈ ದಾನಿಯೇಲನಲ್ಲಿ ಪರಮಬುದ್ಧಿ ಇದ್ದದರಿಂದ ಅವನು ವಿುಕ್ಕ ಮುಖ್ಯಾಧಿಕಾರಿಗಳಿಗಿಂತಲೂ ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು; ಅವನನ್ನು ರಾಜನು ಪೂರ್ಣರಾಜ್ಯದ ಮೇಲೆ ನೇವಿುಸಲು ಉದ್ದೇಶಿಸಿದನು.
4
ಹೀಗಿರಲು ಮುಖ್ಯಾಧಿಕಾರಿಗಳೂ ದೇಶಾಧಿಪತಿಗಳೂ ರಾಜ್ಯಭಾರದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು; ಆದರೆ ತಪ್ಪುಹೊರಿಸುವ ಯಾವ ಸಂದರ್ಭವನ್ನೂ ಯಾವ ತಪ್ಪನ್ನೂ ಕಾಣಲಾರದೆ ಹೋದರು; ಅವನು ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ.
5
ಆಗ ಆ ಮನುಷ್ಯರು - ಈ ದಾನಿಯೇಲನ ಮೇಲೆ ತಪ್ಪುಹೊರಿಸಲು ಇವನ ದೇವಧರ್ಮದ ಮೂಲಕವೇ ಹೊರತು ಇನ್ನಾವದರಲ್ಲಿಯೂ ನಮಗೆ ಅವಕಾಶ ದೊರೆಯದು ಅಂದುಕೊಂಡರು.
6
ಹೀಗೆ ಮುಖ್ಯಾಧಿಕಾರಿಗಳೂ ದೇಶಾಧಿಪತಿಗಳೂ ರಾಜನ ಸಮ್ಮುಖದಲ್ಲಿ ನೆರೆದುಬಂದು ಅವನಿಗೆ - ಅರಸನಾದ ದಾರ್ಯಾವೆಷನೇ, ಚಿರಂಜೀವಿಯಾಗಿರು!
7
ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ಖಂಡಿತ ನಿಬಂಧನೆಯನ್ನು ರಾಜಾಜ್ಞಾರೂಪವಾಗಿ ವಿಧಿಸುವದು ಒಳ್ಳೇದೆಂದು ರಾಜ್ಯದ ಸಕಲ ಮುಖ್ಯಾಧಿಕಾರಿ ನಾಯಕ ದೇಶಾಧಿಪತಿ ಮಂತ್ರಿ ಸಂಸ್ಥಾನಾಧ್ಯಕ್ಷರೂ ಆಲೋಚನೆಮಾಡಿಕೊಂಡಿದ್ದಾರೆ.
8
ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ನಿಂತುಹೋಗದೆ ಮೇದ್ಯಯರ ಮತ್ತು ಪಾರಸಿಯರ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ ಊರ್ಜಿತವಾಗುವಂತೆ ಶಾಸನಕ್ಕೆ ಹಸ್ತಾಕ್ಷರಮಾಡು ಎಂದು ಬಿನ್ನವಿಸಲು
9
ರಾಜನಾದ ದಾರ್ಯಾವೆಷನು ಈ ನಿಬಂಧನಶಾಸನಕ್ಕೆ ರುಜುಹಾಕಿದನು.
10
ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇವಿುನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರಸಲ್ಲಿಸಿದನು.
11
ಆಗ ಆ ಜನರು ಗುಂಪಾಗಿ ಕೂಡಿ ದಾನಿಯೇಲನು ತನ್ನ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುವದನ್ನು ಕಂಡು ಸನ್ನಿಧಿಗೆ ಬಂದು
12
ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ - ರಾಜನೇ, ಯಾವನಾದರೂ ಮೂವತ್ತು ದಿನಗಳ ತನಕ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದಿಯಲ್ಲಾ ಎಂದು ಕೇಳಲು ರಾಜನು - ಹೌದು, ಮೇದ್ಯಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರ ಎಂದು ಉತ್ತರಕೊಟ್ಟನು.
13
ಇದಕ್ಕವರು ಸನ್ನಿಧಿಯಲ್ಲಿ - ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಪ್ರಾರ್ಥಿಸಿಕೊಳ್ಳುತ್ತಾನೆ ಎಂದು ಅರಿಕೆಮಾಡಿದರು.
14
ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡು ದಾನಿಯೇಲನನ್ನು ತಪ್ಪಿಸಬೇಕೆಂದು ಮನಸ್ಸುಮಾಡಿ ಇವನನ್ನು ಹೇಗೆ ರಕ್ಷಿಸಲಿ ಎಂದು ಸೂರ್ಯಾಸ್ತಮಾನದ ತನಕ ಪ್ರಯಾಸಪಟ್ಟನು.
15
ಇದನ್ನು ತಿಳಿದು ಆ ಜನರು ಸನ್ನಿಧಿಗೆ ಕೂಡಿಬಂದು - ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ ಪಾರಸಿಯರಲ್ಲಿಯೂ ಉಂಟೆಂಬದು ನಿನಗೆ ಗೊತ್ತಿರಲಿ ಎಂದು ಹೇಳಲು ರಾಜನ ಅಪ್ಪಣೆಯಾಯಿತು;
16
ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ - ನೀನು ನಿತ್ಯವೂ ಭಜಿಸುವ ದೇವರು ನಿನ್ನನ್ನುದ್ಧರಿಸಲಿ ಎಂದು ಹರಸಿದನು.
17
ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು; ದಾನಿಯೇಲನ ಗತಿಯು ಬೇರೆಯಾಗದಂತೆ ರಾಜನು ತನ್ನ ಮುದ್ರೆಯಿಂದಲೂ ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮೊಹರುಮಾಡಿದನು.
18
ಅನಂತರ ರಾಜನು ಅರಮನೆಗೆ ಹೋಗಿ ವಿನೋದ ವಾದ್ಯಗಳನ್ನು ತನ್ನ ಮುಂದೆ ತರಿಸದೆ ಉಪವಾಸವಾಗಿ ರಾತ್ರಿಯನ್ನು ಕಳೆದನು; ಅವನಿಗೆ ನಿದ್ರೆತಪ್ಪಿತು.
19
ಮಾರಣೆಯ ಬೆಳಿಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ತ್ವರೆಯಾಗಿ ಹೋದನು.
20
ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು ಅವನು ದುಃಖಧ್ವನಿಯಿಂದ ದಾನಿಯೇಲನನ್ನು ಕೂಗಿ - ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸ ಶಕ್ತನಾದನೋ ಎಂದು ಕೇಳಲು
21
ದಾನಿಯೇಲನು ರಾಜನಿಗೆ - ಅರಸೇ, ಚಿರಂಜೀವಿಯಾಗಿರು!
22
ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು; ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ; ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು, ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ ಎಂದು ಹೇಳಿದನು.
23
ಅದನ್ನು ಕೇಳಿ ರಾಜನು ಬಹು ಸಂತೋಷಪಟ್ಟು ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆತ್ತಬೇಕೆಂದು ಅಪ್ಪಣೆಮಾಡಲು ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ.
24
ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರುಹೊರಿಸಿದವರನ್ನು ತಂದು ಅವರನ್ನೂ ಅವರ ಹೆಂಡತಿಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು; ಅವರು ಗವಿಯ ಅಡಿಯನ್ನು ಮುಟ್ಟುವದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.
25
ಆಗ ರಾಜನಾದ ದಾರ್ಯಾವೆಷನು ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ ಕುಲಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನ್ನು ಬರೆಯಿಸಿದನು - ನಿಮಗೆ ಸುಖವು ಹೆಚ್ಚೆಚ್ಚಾಗಲಿ!
26
ನಾನಾಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯ ಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳಿಕೆಯು ಶಾಶ್ವತವಾಗಿರುವದು;
27
ಆತನು ಉದ್ಧರಿಸುವವನೂ ರಕ್ಷಿಸುವವನೂ ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡಿಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಕೈಯಿಂದ ತಪ್ಪಿಸಿದನು.
28
ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸಿಯನಾದ ಕೋರೆಷನ ಆಳಿಕೆಯಲ್ಲಿಯೂ ಘನವಂತನಾಗಿ ಬಾಳಿದನು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 7 →
All chapters:
1
2
3
4
5
6
7
8
9
10
11
12