bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Haggai 2
Haggai 2
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 1
Jump to:
Chapter 1
Chapter 2
1
ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು -
2
ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್ ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಜನಶೇಷ, ಇವರೆಲ್ಲರಿಗೆ ಹೀಗೆ ನುಡಿ -
3
ಈ ಆಲಯದ ಪೂರ್ವವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಾಗಿ ಕಾಣಿಸುತ್ತದಲ್ಲವೆ.
4
ಯೆಹೋವನು ಇಂತೆನ್ನುತ್ತಾನೆ - ಜೆರುಬ್ಬಾಬೆಲನೇ, ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸ ನಡಿಸಿರಿ; ಇದು ಯೆಹೋವನ ನುಡಿ; ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.
5
ನೀವು ಐಗುಪ್ತದಿಂದ ಪಾರಾಗಿ ಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು [ನೆರವೇರಿಸುವೆನು]; ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ,
6
ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ ಆಕಾಶವನ್ನೂ ಭೂವಿುಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿಸಿ
7
ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಆ ಆಲಯವನ್ನು ವೈಭವದಿಂದ ತುಂಬಿಸುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.
8
ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು; ಇದು ಸೇನಾಧೀಶ್ವರ ಯೆಹೋವನ ನುಡಿ.
9
ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ; ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು, ಇದು ಸೇನಾಧೀಶ್ವರ ಯೆಹೋವನ ನುಡಿ.
10
ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು -
11
ಸೇನಾಧೀಶ್ವರ ಯೆಹೋವನು ಇಂತೆನ್ನುತಾನೆ - ನೀನು ಯಾಜಕರ ಹತ್ತಿರ ಹೋಗಿ -
12
ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನು ಇಲ್ಲವೆ ಗುಗ್ಗರಿಯನ್ನು ಅಥವಾ ದ್ರಾಕ್ಷಾರಸವನ್ನು ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವವೋ ಎಂದು ಧರ್ಮವಿಧಿಯನ್ನು ವಿಚಾರಿಸು. [ಪ್ರವಾದಿಯು ಹಾಗೆ ವಿಚಾರಿಸಲು] ಯಾಜಕರು ಇಲ್ಲವೆಂದು ಉತ್ತರ ಕೊಟ್ಟರು.
13
ಆಮೇಲೆ ಹಗ್ಗಾಯನು - ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವದನ್ನಾದರೂ ಸೋಕಿದರೆ ಅದು ಅಶುದ್ಧವಾಗುವದೋ ಎಂದು ಕೇಳಿದ್ದಕ್ಕೆ ಯಾಜಕರು - ಅಶುದ್ಧವೇ ಆಗುವದು ಎಂದು ಉತ್ತರಕೊಟ್ಟರು.
14
ಆಗ ಹಗ್ಗಾಯನು ಆ ಪ್ರಸ್ತಾಪವೆತ್ತಿ ಹೀಗಂದನು - ಯೆಹೋವನು ಇಂತೆನ್ನುತ್ತಾನೆ - ಅದರಂತೆ ಈ ಪ್ರಜೆಯು, ಅದರಂತೆ ಈ ಜನಾಂಗವು, ಅದರಂತೆ ಇವರು ಕೈ ಹಾಕುವ ಎಲ್ಲಾ ಕೆಲಸವು, ಅಲ್ಲಿ ತಂದಿಡುವ ನ್ಯೆವೇದ್ಯವು ನನಗೆ ಅಶುದ್ಧವೇ ಸರಿ.
15
ಯೆಹೋವನ ಆಲಯನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ;
16
ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ಮೆದೆಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತಷ್ಟೆ.
17
ನಾನು ನಿಮ್ಮ ಕೈದುಡಿತದ ಫಲವನ್ನೆಲ್ಲಾ ಆನೆಕಲ್ಲು, ಕಾಡಿಗೆ, ಬಿಸಿಗಾಳಿ, ಇವುಗಳಿಂದ ಹಾಳು ಮಾಡಿ ನಿಮ್ಮನ್ನು ಬಾಧಿಸಿದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ; ಇದು ಯೆಹೋವನ ನುಡಿ.
18
ಜ್ಞಾಪಕಮಾಡಿಕೊಳ್ಳಿರಿ; ಯೆಹೋವನ ಆಲಯಕ್ಕೆ ಅಸ್ತಿವಾರಹಾಕಿದ ಈ ದಿವಸದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ. ಕಣಜದಲ್ಲಿ ಕಾಳು ಇನ್ನು ಇದೆಯೋ?
19
ದ್ರಾಕ್ಷೆ, ಅಂಜೂರ, ದಾಳಿಂಬರ, ಒಲೀವ, ಈ ಗಿಡಗಳು ಫಲಿಸಲಿಲ್ಲವಲ್ಲಾ. ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.
20
[ಒಂಭತ್ತನೆಯ] ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಹಗ್ಗಾಯನಿಗೆ ಈ ಎರಡನೆಯ ವಾಕ್ಯವನ್ನು ದಯಪಾಲಿಸಿದನು -
21
ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆ ನುಡಿ - ನಾನು ಭೂಮ್ಯಾಕಾಶಗಳನ್ನು ಅದುರಿಸಿ
22
ರಾಜ್ಯಗಳ ಸಿಂಹಾಸನವನ್ನು ಕೆಡವಿ ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸ ಮಾಡಿ ರಥಗಳನ್ನೂ ರಥಾರೂಢರನ್ನೂ ದೊಬ್ಬಿಬಿಡುವೆನು; ಕುದುರೆಗಳೂ ರಾಹುತರೂ ಬಿದ್ದು ಹೋಗುವರು, ಪ್ರತಿಯೊಬ್ಬನು ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.
23
ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಶೆಯಲ್ತೀಯೇಲನ ಮಗನೂ ನನ್ನ ಸೇವಕನೂ ಆದ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವಾಗಿ ಮಾಡಿಕೊಳ್ಳುವೆನು, ಇದಕ್ಕೆ ನಿನ್ನನ್ನು ಆರಿಸಿಕೊಂಡಿದ್ದೇನೆ; ಇದು ಸೇನಾಧೀಶ್ವರ ಯೆಹೋವನ ನುಡಿ.
← Chapter 1
Jump to:
Chapter 1
Chapter 2
All chapters:
1
2