bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
1 Kings 20
1 Kings 20
Kannada Bible (KNCL) BSI 2016
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 21 →
1
ಸಿರಿಯಾದವರ ಅರಸ ಬೆನ್ಹದದನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತು ಎರಡು ಮಂದಿ ರಾಜರೊಡನೆ ಹೊರಟು ಬಂದು, ಸಮಾರಿಯ ಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು.
2
ಆ ಪಟ್ಟಣದಲ್ಲಿದ್ದ ಇಸ್ರಯೇಲರ ಅರಸ ಅಹಾಬನ ಬಳಿಗೆ ದೂತರನ್ನು ಕಳುಹಿಸಿದನು.
3
“ನಿನ್ನ ಬೆಳ್ಳಿಬಂಗಾರವು ನನ್ನದು; ನಿನ್ನ ಪ್ರಿಯ ಸತಿಸುತರರೂ ನನ್ನವರೇ ಎಂದು ತಿಳಿದುಕೋ,” ಎಂಬುದಾಗಿ ಆ ದೂತರಿಂದ ಹೇಳಿಸಿದನು.
4
ಅದಕ್ಕೆ ಇಸ್ರಯೇಲರ ಆ ಅರಸನು, “ನನ್ನ ಒಡೆಯನಾದ ಅರಸರೇ, ನೀವು ಹೇಳಿದಂತೆ ನಾನು ನಿಮ್ಮವನೇ; ನನಗಿರುವುದೆಲ್ಲವೂ ನಿಮ್ಮದೇ,” ಎಂದು ಉತ್ತರಕೊಟ್ಟು ಕಳುಹಿಸಿದನು.
5
ಆ ದೂತರು ಮರಳಿ ಅಹಾಬನ ಬಳಿಗೆ ಬಂದು, “ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿಕಳುಹಿಸಿದೆನಲ್ಲವೆ?
6
ನಾಳೆ ಇಷ್ಟುಹೊತ್ತಿಗೆ ನನ್ನ ಆಳುಗಳನ್ನು ಕಳುಹಿಸುವೆನು; ಅವರು ನಿನ್ನ ಮತ್ತು ನಿನ್ನ ಅಧಿಕಾರಿಗಳ ಮನೆಗಳನ್ನು ಶೋಧಿಸಿ, ನಿಮಗೆ ಅಮೂಲ್ಯವಾದುವುಗಳನ್ನೆಲ್ಲಾ ತೆಗೆದುಕೊಳ್ಳುವರು ಎಂಬುದಾಗಿ ಬೆನ್ಹದದನು ತಿಳಿಸುತ್ತಾರೆ,” ಎಂದು ಹೇಳಿದರು.
7
ಆಗ ಇಸ್ರಯೇಲರ ಆ ಅರಸನು ನಾಡಿನ ಎಲ್ಲ ಹಿರಿಯರನ್ನು ಕರೆಸಿ ಅವರಿಗೆ, “ನೋಡಿದಿರೋ, ಅವನು ನಮಗೆಂಥ ಕೇಡು ಬಗೆಯುತ್ತಾನೆ; ‘ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಕೊಡು’ ಎಂದು ಹೇಳಿಕಳುಹಿಸಿದ್ದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ,” ಎಂದು ಹೇಳಿದನು.
8
ಹಿರಿಯರೆಲ್ಲರೂ ಜನಸಾಮಾನ್ಯರೂ ಅವನಿಗೆ, “ನೀವು ಈ ಮಾತಿಗೆ ಒಪ್ಪಬೇಡಿ,” ಎಂದರು.
9
ಆದುದರಿಂದ ಅವನು ಬಂದಂಥ ದೂತರ ಮುಖಾಂತರ ಬೆನ್ಹದದನಿಗೆ, “ನನ್ನ ಒಡೆಯರೇ, ಅರಸರೇ, ನಾನು ನಿಮ್ಮ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ; ಆದರೆ ಎರಡನೆಯ ಮಾತಿಗೆ ಒಪ್ಪಲಾರೆ,” ಎಂದು ಹೇಳಿಕಳುಹಿಸಿದನು ದೂತರು ಬಂದು ಈ ಮಾತುಗಳನ್ನು ಬೆನ್ಹದದನಿಗೆ ತಿಳಿಸಿದರು.
10
ಆಗ ಅವರು ಅಹಾಬನಿಗೆ, “ಸಮಾರಿಯ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡುವೆನು; ಲೆಕ್ಕವಿಲ್ಲದ ನನ್ನ ಸೈನಿಕರು ಅದರಲ್ಲಿ ಒಂದು ಹಿಡಿ ಧೂಳನ್ನೂ ಬಿಡುವುದಿಲ್ಲ; ಬಿಟ್ಟರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಹೇಳಿಕಳುಹಿಸಿದನು.
11
ಬಂದ ದೂತರಿಗೆ ಇಸ್ರಯೇಲರ ಅರಸನು, “ಯುದ್ಧಕ್ಕಾಗಿ ನಡುಕಟ್ಟನ್ನು ಬಿಗಿದುಕೊಳ್ಳುವವನು ಅದನ್ನು ಬಿಚ್ಚಿಡುವ ಜಯಶಾಲಿಯಂತೆ ಕೊಚ್ಚಿಕೊಳ್ಳಬಾರದು ಎಂದು ಅವನಿಗೆ ಹೇಳಿರಿ,” ಎಂದನು.
12
ತನ್ನ ರಾಜರುಗಳ ಸಂಗಡ ಡೇರೆಗಳಲ್ಲಿ ಮದ್ಯಪಾನಮಾಡುತ್ತಿದ್ದ ಬೆನ್ಹದದನು ಈ ಉತ್ತರವನ್ನು ಕೇಳುತ್ತಲೇ, ಪಟ್ಟಣಕ್ಕೆ ಲಗ್ಗೆ ಹತ್ತುವಂತೆ ಸೈನಿಕರಿಗೆ ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು.
13
ಆಗ ಒಬ್ಬ ಪ್ರವಾದಿ ಇಸ್ರಯೇಲರ ಅರಸ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾಸಮೂಹವನ್ನು ನೋಡಿದಿಯೋ? ‘ನಾನೇ ಸರ್ವೇಶ್ವರ’ ಎಂಬುದು ನಿನಗೆ ಮನದಟ್ಟಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೊಪ್ಪಿಸುವೆನು, ಎನ್ನುತ್ತಾರೆ ಸರ್ವೇಶ್ವರ,” ಎಂದು ಹೇಳಿದನು.
14
ಅಹಾಬನು, “ಇದು ಯಾರ ಮುಖಾಂತರ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರ ಮುಖಾಂತರ ಆಗುವುದೆಂದು ಸರ್ವೇಶ್ವರ ತಿಳಿಸುತ್ತಾರೆ,” ಎಂದು ಉತ್ತರಕೊಟ್ಟನು. ಅಹಾಬನು ಮುಂದುವರಿದು, “ಯುದ್ಧ ಪ್ರಾರಂಭಮಾಡತಕ್ಕವರಾರು?” ಎಂದು ಕೇಳಲು ಅವನು, “ನೀನೇ” ಎಂದು ಉತ್ತರಿಸಿದನು.
15
ಅಹಾಬನು ಪ್ರದೇಶಾಧಿಪತಿಗಳ ಆಳುಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಮಂದಿ ಇದ್ದರು; ಇಸ್ರಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಮಂದಿಯಿದ್ದರು.
16
ಮಧ್ಯಾಹ್ನದಲ್ಲಿ, ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಮಂದಿ ರಾಜರ ಸಂಗಡ ಮದ್ಯಪಾನಮಾಡಿ ಮತ್ತನಾಗಿ, ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
17
ಪ್ರದೇಶಾಧಿಪತಿಗಳ ಆಳುಗಳು ಮೊದಲು ಬಂದರು, “ಸಮಾರಿಯದ ಜನರು ಹೊರಗೆ ಬಂದಿರುತ್ತಾರೆ” ಎಂದು ಬೆನ್ಹದದನ ಕಾವಲುಗಾರರು ಅವನಿಗೆ ತಿಳಿಸಿದರು. ಅವನು,
18
“ಅವರು ಯುದ್ಧಕ್ಕಾಗಿಯೇ ಬಂದಿರಲಿ, ಸಮಾಧಾನಕ್ಕಾಗಿಯೇ ಬಂದಿರಲಿ, ಅವರನ್ನು ಸಜೀವಿಗಳನ್ನಾಗಿ ಹಿಡಿದುತನ್ನಿ,” ಎಂದು ಆಜ್ಞಾಪಿಸಿದನು.
19
ಮೊದಲು ಹೊರಟು ಬಂದ ಪ್ರದೇಶಾಧಿಪತಿಗಳ ಆಳುಗಳ ಹಿಂದೆಯೇ ಇಸ್ರಯೇಲ್ ಸೈನ್ಯದವರೂ ಬಂದರು.
20
ಅವರಲ್ಲಿ ಪ್ರತಿಯೊಬ್ಬನು ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದೆ ನಡೆದನು; ಸಿರಿಯಾದವರು ಓಡಿಹೋಗತೊಡಗಿದರು. ಇಸ್ರಯೇಲರು ಅವರನ್ನು ಹಿಂದಟ್ಟಿದರು. ಅರಸ ಬೆನ್ಹದದನು ಹಾಗು ಕೆಲವು ಮಂದಿ ರಾಹುತರು ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು.
21
ಇಸ್ರಯೇಲರ ಅರಸನು ಹೊರಟುಬಂದು ಸಿರಿಯಾದವರ ರಥಾಶ್ವಬಲಗಳನ್ನು ಸೋಲಿಸಿ, ಮಹಾಸಮೂಹವನ್ನು ಸಂಹರಿಸಿದನು.
22
ಆಗ ಆ ಪ್ರವಾದಿ ಮತ್ತೆ ಇಸ್ರಯೇಲರ ಅರಸನ ಬಳಿಗೆ ಬಂದನು. “ಸಿರಿಯಾದವರ ಅರಸನು ಮುಂದಿನ ವರ್ಷ ಇನ್ನೊಮ್ಮೆ ನಿನ್ನ ಮೇಲೆ ದಾಳಿಮಾಡಬರುವನು; ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ; ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಪರ್ಯಾಲೋಚಿಸು,” ಎಂದು ಎಚ್ಚರಿಸಿದನು.
23
ಸಿರಿಯಾದವರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಯೇಲರ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು; ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಖಂಡಿತವಾಗಿ ಜಯಹೊಂದುವೆವು.
24
ನೀವು ಆಯಾ ಸ್ಥಳಗಳಲ್ಲಿರುವ ರಾಜರನ್ನು ತೆಗೆದುಹಾಕಿ, ಅವರಿಗೆ ಬದಲಾಗಿ ಪ್ರದೇಶಾಧಿಪತಿಗಳನ್ನು ನೇಮಿಸಿರಿ.
25
ನಮ್ಮ ಸೈನ್ಯದಿಂದ ನಷ್ಟವಾಗಿಹೋದಷ್ಟು ಜನರನ್ನೂ ಕುದುರೆಗಳನ್ನೂ ರಥಗಳನ್ನೂ ಮತ್ತೆ ಕೂಡಿಸಿ ಅವರೊಡನೆ ಬಯಲಿನಲ್ಲಿ ಯುದ್ಧಮಾಡೋಣ; ನಮಗೆ ಹೇಗೂ ಜಯಸಿಕ್ಕುವುದು ನಿಶ್ಚಯ,” ಎಂದು ಹೇಳಿದರು. ಅವನು ಅದರ ಅಂತೆಯೇ ಮಾಡಿದನು.
26
ಒಂದು ವರ್ಷ ದಾಟಿದನಂತರ ಬೆನ್ಹದದನು ಸಿರಿಯಾದವರನ್ನು ಕೂಡಿಸಿಕೊಂಡು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಅಫೇಕಕ್ಕೆ ಬಂದನು.
27
ಇಸ್ರಯೇಲರು ಸಹ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಂಡು ಅವರಿಗೆ ವಿರುದ್ಧ ಕೂಡಿಬಂದರು. ಸಿರಿಯಾದವರು ನಾಡಿನಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿದ್ದ ಇಸ್ರಯೇಲರು ಅವರ ಎದುರಿನಲ್ಲೇ ಪಾಳೆಯಮಾಡಿಕೊಂಡರು.
28
ಆಗ ದೈವಪುರುಷನೊಬ್ಬನು ಇಸ್ರಯೇಲರ ಅಹಾಬನ ಬಳಿಗೆ ಬಂದು, “ಸರ್ವೇಶ್ವರ ಹೀಗೆನ್ನುತ್ತಾರೆ, ‘ಸರ್ವೇಶ್ವರ ಕಣಿವೆಗಳ ದೇವರಲ್ಲ, ಬೆಟ್ಟಗಳ ದೇವರಾಗಿ ಮಾತ್ರ ಇರುತ್ತಾರೆಂದುಕೊಂಡು ಬಂದಿರುವ ಈ ಸಿರಿಯಾದವರ ಮಹಾಸೈನ್ಯವನ್ನು ನಿನ್ನ ಕೈಗೆ ಒಪ್ಪಿಸುವೆನು; ಇದರಿಂದ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು,” ಎಂದು ಹೇಳಿದನು.
29
ಈ ಎರಡು ಸೈನ್ಯಗಳೂ ಏಳುದಿನಗಳವರೆಗೆ ಎದುರುಬದುರಾಗಿ ಪಾಳೆಯಮಾಡಿಕೊಂಡಿದ್ದವು; ಏಳನೆಯ ದಿನದಲ್ಲಿ ಯುದ್ಧಪ್ರಾರಂಭವಾಯಿತು. ಇಸ್ರಯೇಲರು ಆ ಒಂದೇ ದಿನದಲ್ಲಿ ಸಿರಿಯಾದವರ ಒಂದು ಲಕ್ಷಮಂದಿ ಕಾಲಾಳುಗಳನ್ನು ವಧಿಸಿದರು.
30
ಉಳಿದ ಇಪ್ಪತ್ತೇಳು ಸಾವಿರಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆ ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನೂ ಆ ಪಟ್ಟಣವನ್ನು ಹೊಕ್ಕು, ಒಂದು ಮನೆಯ ಒಳಕೋಣೆಯಲ್ಲಿ ಅಡಗಿಕೊಂಡನು.
31
ಆಗ ಅವನ ಅಧಿಕಾರಿಗಳು, “ಇಸ್ರಯೇಲರ ಅರಸರು ದಯೆಯುಳ್ಳವರೆಂದು ನಾವು ಕೇಳಿದ್ದೇವೆ; ಆದುದರಿಂದ ಸೊಂಟಕ್ಕೆ ಗೋಣೀತಟ್ಟು ಕಟ್ಟಿಕೊಂಡು, ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಆ ಅರಸನ ಬಳಿಗೆ ಹೋಗುವುದಕ್ಕೆ ನಮಗೆ ಅಪ್ಪಣೆಯಾಗಲಿ; ಹೀಗೆ ಮಾಡಿದರೆ ಅವನು ತಮ್ಮ ಜೀವವನ್ನು ಉಳಿಸಬಹುದು,” ಎಂದು ಹೇಳಿದರು.
32
ಅವರು ಸೊಂಟಕ್ಕೆ ಗೋಣೀತಟ್ಟು ಕಟ್ಟಿಕೊಂಡು ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಇಸ್ರಯೇಲರ ಅರಸನ ಬಳಿಗೆ ಬಂದು, “ಜೀವದಾನ ಮಾಡಬೇಕೆಂದು ನಿಮ್ಮ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ,” ಎಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು,” ಎಂದು ಉತ್ತರಕೊಟ್ಟನು.
33
ಅವರು ಈ ಮಾತು ಶುಭವಚನವೆಂದು ನೆನೆಸಿ, ಕೂಡಲೆ ಅವನ ಮಾತನ್ನೇ ಅನುಮೋದಿಸಿ, “ಬೆನ್ಹದದನು ನಿಮ್ಮ ಸಹೋದರನೇ ಹೌದು,” ಎಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು. ಅವನು ಬಂದಾಗ ಅವನನ್ನು ತನ್ನ ರಥದಲ್ಲೇ ಕುಳ್ಳಿರಿಸಿಕೊಂಡನು.
34
ಬೆನ್ಹದದನು ಅವನಿಗೆ, “ನನ್ನ ತಂದೆ, ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ; ಅವನು ಸಮಾರಿಯಾದಲ್ಲಿ ಮಾಡಿದಂತೆ ನೀನೂ ನನಗಾಗಿ ದಮಸ್ಕದಲ್ಲಿ ಕೆಲವು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳಬಹುದು,” ಎಂದು ಹೇಳಿದನು. ಅಹಾಬನು, “ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ,” ಎಂದು ಹೇಳಿ, ಅವನಿಂದ ಪ್ರಮಾಣಮಾಡಿಸಿ ಕಳುಹಿಸಿಬಿಟ್ಟನು.
35
ಪ್ರವಾದಿಮಂಡಲಿಯವರಲ್ಲಿ ಒಬ್ಬನು, ಸರ್ವೇಶ್ವರನಿಂದ ಪ್ರೇರಿತನಾಗಿ ತನ್ನ ಜೊತೆಗಾರನೊಬ್ಬನಿಗೆ, “ನನ್ನನ್ನು ಹೊಡೆ,” ಎಂದು ಹೇಳಿದನು. ಅದಕ್ಕೆ ಅವನು ಒಪ್ಪಲಿಲ್ಲ.
36
ಆಗ ಆ ಪ್ರವಾದಿ ಅವನಿಗೆ, “ನೀನು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ನನ್ನನ್ನು ಬಿಟ್ಟು ಹೊರಟಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು,” ಎಂದನು. ಅಂತೆಯೇ ಅವನು ಇವನನ್ನು ಬಿಟ್ಟುಹೋದ ಕೂಡಲೆ, ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು.
37
ಅನಂತರ ಆ ಪ್ರವಾದಿ ಇನ್ನೊಬ್ಬನನ್ನು ನೋಡಿ, “ನನ್ನನ್ನು ಹೊಡೆ,” ಎಂದು ಬೇಡಿಕೊಂಡನು. ಅವನು ಇವನನ್ನು ಗಾಯವಾಗುವಷ್ಟು ಹೊಡೆದನು.
38
ಆಗ ಇವನು ತನ್ನ ಗುರುತು ತಿಳಿಯಬಾರದೆಂದು ರುಮಾಲಿನಿಂದ ಕಣ್ಣುಗಳನ್ನು ಮುಚ್ಚಿಕೊಂಡು, ಅರಸನು ಬರುವ ದಾರಿಯಲ್ಲಿ ಕಾದು ನಿಂತನು.
39
ಅರಸನು ಹಾದುಹೋಗುವಾಗ ಅವನಿಗೆ, “ನಿಮ್ಮ ಸೇವಕನಾದ ನಾನು ಯುದ್ಧಕ್ಕೆ ಹೋಗಿದ್ದಾಗ ರಣರಂಗದಲ್ಲಿ ಒಬ್ಬನು, ಇನ್ನೊಬ್ಬನನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದು, ‘ನೀನು ಇವನನ್ನು ಕಾಯಬೇಕು, ಇವನು ತಪ್ಪಿಸಿಕೊಂಡರೆ ಇವನ ಪ್ರಾಣಕ್ಕೆ ನಿನ್ನ ಪ್ರಾಣವು ನನ್ನದಾಗಿರುವುದು; ಇಲ್ಲವೆ ನೀನು ನನಗೆ ಮೂರು ಸಾವಿರ ಬೆಳ್ಳಿನಾಣ್ಯವನ್ನು ಕೊಡಬೇಕು’ ಎಂದು ಆಜ್ಞಾಪಿಸಿದನು.
40
ನಾನು ಬೇರೆ ಕೆಲಸದಲ್ಲಿದ್ದಾಗ ಆ ವ್ಯಕ್ತಿ ತಪ್ಪಿಸಿಕೊಂಡು ಹೋದನು,” ಎಂದು ಮೊರೆಯಿಟ್ಟನು. ಇಸ್ರಯೇಲರ ಅರಸನು ಇವನಿಗೆ, “ನಿನಗೆ ಆ ತೀರ್ಪು ಸರಿಯಾಗಿದೆ; ತೀರ್ಮಾನಿಸಿದವನು ನೀನೇ ಅಲ್ಲವೇ?’ ಎಂದು ನುಡಿದನು.
41
ಕೂಡಲೆ ಆ ಪ್ರವಾದಿ ಕಣ್ಣುಗಳ ಮೇಲಿನಿಂದ ರುಮಾಲನ್ನು ತೆಗೆದನು. ಅವನು ಪ್ರವಾದಿಗಳಲ್ಲೊಬ್ಬನೆಂದು ಇಸ್ರಯೇಲರ ಅರಸನಿಗೆ ಗೊತ್ತು ಆಯಿತು.
42
ಆಗ ಆ ಪ್ರವಾದಿ ಅರಸನಿಗೆ, “ಸಂಹರಿಸಬೇಕೆಂದು ಹೇಳಿ ನಾನು ನಿನ್ನ ಕೈಗೆ ಒಪ್ಪಿಸಿದ ವ್ಯಕ್ತಿಯನ್ನು ನೀನು ಹೋಗಿಬಿಟ್ಟದ್ದರಿಂದ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವು ಹೋಗುವುದು; ನಿನ್ನ ಪ್ರಜೆಗಳು ಅವನ ಪ್ರಜೆಗಳಾಗುವರು, ಎನ್ನುತ್ತಾರೆ ಸರ್ವೇಶ್ವರ,” ಎಂದು ಹೇಳಿದನು.
43
ಇಸ್ರಯೇಲರ ಅರಸನು ಸಿಟ್ಟಿನಿಂದ, ಗಂಟುಮೋರೆ ಮಾಡಿಕೊಂಡು, ಸಮಾರಿಯದಲ್ಲಿ ಇದ್ದ ತನ್ನ ಮನೆಗೆ ಹೋದನು.
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 21 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22