bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Lamentations 2
Lamentations 2
Kannada Bible (KNCL) BSI 2016
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 3 →
1
ಅಯ್ಯಯ್ಯೋ, ಸ್ವಾಮಿಯೆ ಸಿಟ್ಟುಗೊಂಡಿರುವನಲ್ಲಾ! ಸಿಯೋನ್ ಕುವರಿಗೆ ಕಾರ್ಮೋಡ ಕವಿದಂತೆ ಮಾಡಿರುವನಲ್ಲಾ! ಇಸ್ರಯೇಲಿನ ವೈಭವವನ್ನು ಆಗಸದಿಂದ ನೆಲಕ್ಕೆಸೆದುಬಿಟ್ಟಿರುವನಲ್ಲಾ! ಆ ಸಿಟ್ಟಿನ ದಿನದಂದು ತನ್ನ ಪಾದಪೀಠವಾದ ದೇವಾಲಯವನ್ನೂ ನೆನೆಯದೆಹೋದನಲ್ಲಾ!
2
ಸ್ವಾಮಿ ಯಕೋಬಿನ ನಿವಾಸಿಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.
3
ಶತ್ರು ಬಂದೆರಗಿದಾಗ ಸ್ವಾಮಿ ತನ್ನ ಶಕ್ತಿಯುತ ಕೈಯನ್ನು ಹಿಂದೆಗೆದುಬಿಟ್ಟ, ಇಸ್ರಯೇಲಿನ ಕೋಡನ್ನು ಕಡಿದು ಪುಡಿಪುಡಿ ಮಾಡಿಬಿಟ್ಟ, ಸುತ್ತುಗಟ್ಟಿ ನುಂಗುವ ಅಗ್ನಿಜ್ವಾಲೆಯಂತೆ ಯಕೋಬನನ್ನು ದಹಿಸಿಬಿಟ್ಟ.
4
ಬಿಲ್ಲುಹಿಡಿದು ಬಂದ ಆತ ವೈರಿಯಂತೆ ಬಲಗೈಯೆತ್ತಿ ನಿಂತ ವಿರೋಧಿಯಂತೆ, ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.
5
ಸ್ವಾಮಿಯೇ ಶತ್ರುವಾಗಿ ಕಬಳಿಸಿದ ಇಸ್ರಯೇಲನ್ನು ನಾಶಮಾಡಿದ ಅದರ ಅರಮನೆಗಳೆಲ್ಲವನ್ನು ನೆಲಸಮಗೊಳಿಸಿದ ಅದರ ಕೋಟೆಕೊತ್ತಲಗಳನ್ನು ಯಥೇಚ್ಛವಾಗಿಸಿದ ಯೆಹೂದ ನಾಡಿನ ಗೋಳಾಟವನ್ನು.
6
ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ ತೋಟದ ಗುಡಿಸಲನ್ನೋ ಎಂಬಂತೆ. ಮಹೋತ್ಸವಗಳನ್ನೂ ಸಬ್ಬತ್ದಿನಗಳನ್ನೂ ಅಳಿಸಿಬಿಟ್ಟ ನೆನಪಿಗೂ ಬಾರದಂತೆ. ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ ಅತಿ ರೋಷಾವೇಷಗೊಂಡವನಂತೆ.
7
ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ. ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ!
8
ಸಿಯೋನ್ ನಗರಿಯ ಕೋಟೆಯನ್ನು ನಾಶಪಡಿಸಲೆಂದು ಎಳೆದಿರುವನಲ್ಲಾ ಸರ್ವೇಶ್ವರ ಅಳತೆನೂಲನ್ನು! ಹಾಳುಮಾಡುವ ತನ್ನ ಕೈಯನ್ನು ಹಿಂದೆಗೆಯದೆ ಬಿರುಕುಗೊಳಿಸಿದ್ದಾನೆ ಪೌಳಿಗೋಡೆಯನ್ನೇ, ಕೋಟೆಯನ್ನೇ, ಅವುಗಳೆರಡೂ, ಕುಸಿದು ಬಿದ್ದುಹೋಗಿವೆ.
9
ಹೂತುಹೋಗಿವೆ ಸಿಯೋನ್ ಹೆಬ್ಬಾಗಿಲುಗಳು ಚೂರುಚೂರಾಗಿ ಬಿದ್ದಿವೆ ಅದರ ಅಗುಳಿಗಳು. ಅರಸರೂ ಪಾಲಕರೂ ಸೇರಿಹೋದರು ಅನ್ಯಜನಾಂಗಗಳೊಳು. ನಿಂತುಹೋಗಿವೆ ಧರ್ಮಶಾಸ್ತ್ರ ಬೋಧನೆಗಳು. ಸರ್ವೇಶ್ವರನಿಂದ ಪ್ರವಾದಿಗಳಿಗೆ ಆಗುತ್ತಿದ್ದ ದಿವ್ಯದರ್ಶನಗಳು.
10
ತಲೆಯ ಮೇಲೆ ಧೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು.
11
ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ.
12
‘ಅಮ್ಮಾ ತಿನ್ನಲಿಕ್ಕಿಲ್ಲವೆ? ಕುಡಿಯಲಿಕ್ಕಿಲ್ಲವೆ? ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯ ಮೇಲೆ ಆ ಹಸುಳೆಗಳು.
13
ಎಲೌ ಜೆರುಸಲೇಮ್ ಯುವತಿಯೇ, ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ?
14
ನಿನ್ನ ಪ್ರವಾದಿಗಳು ಕಂಡ ದರ್ಶನದಲ್ಲಿ ಸಾರವಿಲ್ಲ, ಅರ್ಥವಿಲ್ಲ. ನಿನ್ನ ದೋಷಗಳನ್ನು ಬೈಲಿಗೆಳೆಯಲು ಅವರಿಂದಾಗಲಿಲ್ಲ. ಈ ಕಾರಣ, ನಿನ್ನ ದುರವಸ್ಥೆಯನ್ನು ತಡೆಗಟ್ಟಲಾಗಲಿಲ್ಲ. ನಿನ್ನ ಬಗ್ಗೆ ಅವರು ನುಡಿದ ದೈವೋಕ್ತಿಗಳು ವ್ಯರ್ಥವಾದುವು, ನೀನು ಗಡಿಪಾರಾಗಿ ಹೋಗಲು ಅವು ಆಸ್ಪದವಾದುವು.
15
ಹಾದುಹೋಗುವವರೆಲ್ಲ ಕೈ ತಟ್ಟುತ್ತಾರಲ್ಲಾ ನಿನ್ನನ್ನು ನೋಡಿ ಜೆರುಸಲೇಮ್ ನಗರಿಯಾದ ನಿನ್ನನ್ನು ಗುರುತಿಸಿ! “ಆಹಾ, ನೀನೇನೋ ಸರ್ವಾಂಗ ಸುಂದರಿ, ವಿಶ್ವಾನಂದದಾಯಕಿ!” ಎಂದು ಮೂದಲಿಸುತ್ತಾರಲ್ಲಾ ತಲೆಯಾಡಿಸಿ, ಸಿಳ್ಳುಹಾಕಿ!
16
ನಿನ್ನನ್ನು ನೋಡಿ ಶತ್ರುಗಳೆಲ್ಲರು ಕಟಕಟನೆ ಹಲ್ಲು ಕಡಿಯುತ್ತಾರಲ್ಲಾ ಬಾಯಿ ಕಿಸಿದು! “ಹಾ, ಆಕೆಯನ್ನು ಕಬಳಿಸಿಬಿಟ್ಟೆವು ಈ ದಿನಕ್ಕಾಗಿಯೆ ನಾವು ಕಾದಿದ್ದೆವು ಈಗ ಅದನ್ನು ಕಣ್ಣಾರೆ ಕಂಡೆವು” ಎಂದು ಕೊಚ್ಚಿಕೊಳ್ಳುತ್ತಾರಲ್ಲಾ!
17
ಸರ್ವೇಶ್ವರ ಸಿದ್ಧಿಗೆ ತಂದಿದ್ದಾನೆ ತನ್ನ ಸಂಕಲ್ಪವನ್ನು ಈಡೇರಿಸಿದ್ದಾನೆ ಪುರಾತನ ಕಾಲದಲ್ಲಿ ತಾನು ನುಡಿದುದನ್ನು. ನಿನ್ನನ್ನು ಧ್ವಂಸಮಾಡಿದ್ದಾನೆ ದಯೆದಾಕ್ಷಿಣ್ಯವಿಲ್ಲದೆ. ಆನಂದ ತಂದಿದ್ದಾನೆ ವೈರಿಗಳಿಗೆ ಕೋಡುಮೂಡಿಸಿದ್ದಾನೆ ವಿರೋಧಿಗಳಿಗೆ!
18
ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ.
19
ರಾತ್ರಿಯ ಒಂದೊಂದು ಜಾವದಲ್ಲೂ ಎದ್ದು ಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆಮಾಡಿ. ಹಸಿವಿನಿಂದ ಅವು ಮೂರ್ಛೆಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.
20
ಹೇ, ಸರ್ವೇಶ್ವರಾ ಕಟಾಕ್ಷಿಸು! ಇಷ್ಟೆಲ್ಲಾ ನೀ ಮಾಡಿದ್ದು ಯಾರಿಗೆಂದು ಯೋಚಿಸು! ತಾಯಂದಿರು ತಿನ್ನಬೇಕೆ ತಾವು ಆರೈಕೆ ಮಾಡಿದ ತಮ್ಮ ಕರುಳ ಕುಡಿಯನ್ನೇ? ಹತರಾಗಬೇಕೆ ಯಾಜಕರೂ ಪ್ರವಾದಿಗಳೂ ಸ್ವಾಮಿಯ ಪವಿತ್ರಾಲಯದಲ್ಲೆ?
21
ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ. ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ!
22
ಸುತ್ತಮುತ್ತಲೂ ದಿಗಿಲು ಹುಟ್ಟಿಸುವ ನನ್ನ ಹಗೆಗಳನ್ನೆ ಕರೆಸಿದೆಯಲ್ಲಾ ಹಬ್ಬಕ್ಕೋ ಎಂಬಂತೆ! ಸರ್ವೇಶ್ವರನ ಪ್ರಕೋಪದ ದಿನದಂದು ತಪ್ಪಿಸಿಕೊಳ್ಳಲಿಲ್ಲ ಯಾರೂ; ಉಳಿಯಲಿಲ್ಲ ಯಾರೂ. ಶತ್ರು ಸಂಹರಿಸಿಬಿಟ್ಟನಲ್ಲಾ ನಾನು ಸಾಕಿ ಆರೈಕೆ ಮಾಡಿದವರನ್ನೂ!
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 3 →
All chapters:
1
2
3
4
5
Recommended Reading
Commentary
Lamentations Commentaries
→
Devotional
Lamentations Devotional Guide
→
Get This Bible
KNCL Study Bible
→