bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Ruth 4
Ruth 4
Kannada Bible (KNCL) BSI 2016
← Chapter 3
Jump to:
Chapter 1
Chapter 2
Chapter 3
Chapter 4
1
ಇತ್ತ ಬೋವಜನು ಊರಿನ ಸಭಾಮಂಟಪದ ಬಳಿ ಹೋಗಿ ಅಲ್ಲಿ ಕುಳಿತುಕೊಂಡನು.
2
ಅಷ್ಟರಲ್ಲಿ, ಬೋವಜನು ಮುಂಚೆ ಹೇಳಿದ್ದ ಎಲಿಮೆಲೆಕನಿಗೆ ಹತ್ತಿರದ ನೆಂಟನಾಗಿದ್ದವನು ಅಲ್ಲಿಗೆ ಬಂದನು. ಆಗ ಬೋವಜನು ಅವನಿಗೆ: “ಬಾರಪ್ಪಾ, ಇಲ್ಲಿ ಕುಳಿತುಕೊ,” ಎಂದು ಕರೆಯಲು, ಅವನು ಬಂದು ಪಕ್ಕದಲ್ಲೇ ಕುಳಿತುಕೊಂಡನು.
3
ಆಮೇಲೆ ಬೋವಜನು ಹಿರಿಯರಲ್ಲಿ ಹತ್ತುಮಂದಿಯನ್ನು ಕರೆಸಿದನು. ಅವರೂ ಅಲ್ಲಿಗೆ ಬಂದು ಕುಳಿತುಕೊಂಡರು. ಅನಂತರ ಬೋವಜನು ಆ ನೆಂಟನಿಗೆ, “ನಮಗೆ ಸ್ವಂತದವನಾದ ಎಲಿಮೆಲೆಕನಿಗೆ ಸೇರಿದ ಒಂದು ತುಂಡು ಹೊಲ ಇದೆಯಲ್ಲವೇ? ಅದನ್ನು ಮೋವಾಬ್ ನಾಡಿನಿಂದ ಹಿಂದಕ್ಕೆ ಬಂದಿರುವ ನವೊಮಿಯು ಮಾರಬೇಕೆಂದಿದ್ದಾಳೆ. ಇದನ್ನು ನಿನಗೆ ತಿಳಿಸಬೇಕೆನಿಸಿತು.
4
ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಹಿರಿಯರ ಮುಂದೆ ಕೊಂಡುಕೊಳ್ಳುವ ಹಕ್ಕು ಮೊದಲು ನಿನಗೆ, ಅನಂತರ ನನಗೆ ಸೇರಿದ್ದು; ಬೇರೆಯವರಿಗಲ್ಲ,” ಎಂದನು. ಆಗ ಆ ವ್ಯಕ್ತಿ: “ನಾನೇ ಕೊಂಡುಕೊಳ್ಳುತ್ತೇನೆ,” ಎಂದು ಹೇಳಿದನು.
5
ಆಗ ಬೋವಜನು, “ನೀನು ಆ ಹೊಲವನ್ನು ಕೊಂಡುಕೊಳ್ಳುವುದಾದರೆ, ಅವಳ ಸೊಸೆಯಾದ ಮೋವಾಬದ ರೂತಳನ್ನು ನೀನು ಮದುವೆಯಾಗಬೇಕು. ಆಗ ಆ ಹೊಲದ ಖಾತೆ ಗತಿಸಿದ ಮಗನ ಹೆಸರಿನಲ್ಲೇ ಉಳಿಯುತ್ತದೆ,” ಎಂದು ತಿಳಿಸಿದನು.
6
ಅದಕ್ಕೆ ಆ ವ್ಯಕ್ತಿ, “ಹಾಗಾದರೆ ಹೊಲವನ್ನು ಕೊಂಡುಕೊಳ್ಳುವ ಹಕ್ಕನ್ನು ನಾನು ಬಿಟ್ಟುಕೊಡುತ್ತೇನೆ. ಇಲ್ಲದಿದ್ದರೆ ನನ್ನ ಕುಟುಂಬಕ್ಕೆ ಸೇರಿರುವ ಆಸ್ತಿಗೆ ನಷ್ಟವಾಗುತ್ತದೆ. ಆದ್ದರಿಂದ ಆ ಹಕ್ಕನ್ನು ನೀನೇ ವಹಿಸಿಕೋ, ನನ್ನಿಂದಾಗದು,” ಎಂದುಬಿಟ್ಟನು.
7
ಇಸ್ರಯೇಲರಲ್ಲಿ ಆಸ್ತಿಪಾಸ್ತಿಯನ್ನು ಮಾರಾಟಮಾಡುವಾಗ ಅಥವಾ ವಿನಿಮಯಿಸಿಕೊಳ್ಳುವಾಗ ಒಂದು ಪದ್ಧತಿ ರೂಢಿಯಲ್ಲಿತ್ತು; ಕೊಡುವವನು ಕೊಳ್ಳುವವನಿಗೆ ತನ್ನ ಪಾದರಕ್ಷೆಯನ್ನು ಕೊಡುತ್ತಿದ್ದನು. ಹೀಗೆ ಇಸ್ರಯೇಲರ ಮಧ್ಯೆ ವ್ಯವಹಾರವು ಇತ್ಯರ್ಥವಾಗುತ್ತಿತ್ತು.
8
ಅಂತೆಯೇ ಆ ನೆಂಟನು, “ಹೊಲವನ್ನು ನೀನೇ ಕೊಂಡುಕೊ,” ಎಂದು ಹೇಳಿ ತನ್ನ ಪಾದರಕ್ಷೆಯನ್ನು ಬೋವಜನಿಗೆ ತೆಗೆದುಕೊಟ್ಟನು.
9
ಆಗ ಬೋವಜನು ಊರಿನ ಹಿರಿಯರೆಲ್ಲರಿಗೆ ಹಾಗು ಅಲ್ಲಿ ನೆರೆದಿದ್ದ ಜನರಿಗೆ, “ಎಲಿಮೆಲೆಕನಿಗೆ ಮತ್ತು ಕಲ್ಯೋನ್, ಮಹ್ಲೋನ್ ಇವರಿಗೆ ಸೇರಿದ್ದ ಆಸ್ತಿ ಎಲ್ಲವನ್ನೂ ನವೊಮಿಯಿಂದ ನಾನು ಕೊಂಡುಕೊಂಡಿದ್ದೇನೆ. ಇದಕ್ಕೆ ನೀವೆಲ್ಲರೂ ಸಾಕ್ಷಿಗಳು.
10
ಇದಲ್ಲದೆ, ಮಹ್ಲೋನನ ಪತ್ನಿಯಾದ ಮೋವಾಬ್ಯದ ರೂತಳನ್ನು ನನ್ನ ಹೆಂಡತಿಯನ್ನಾಗಿ ಸ್ವೀಕರಿಸಿದ್ದೇನೆ. ಇದರಿಂದ ಹೊಲದ ಖಾತೆ ಗತಿಸಿದ ಮಹ್ಲೋನನ ಹೆಸರಿನಲ್ಲೇ ಉಳಿಯುವುದು. ಮಾತ್ರವಲ್ಲ, ಅವನ ವಂಶವೃಕ್ಷವು ಅವನ ಬಂಧುಬಳಗದವರಲ್ಲೂ ಊರಿನಲ್ಲೂ ನೆಲೆಯಾಗಿರುವುದು. ಇದಕ್ಕೆ ನೀವೆಲ್ಲರೂ ಸಾಕ್ಷಿಗಳು,” ಎಂದನು.
11
ಆಗ ಊರಿನ ಹಿರಿಯರು ಮತ್ತು ನೆರೆದಿದ್ದ ಸಭಿಕರು: “ಹೌದು, ನಾವೆಲ್ಲರೂ ಸಾಕ್ಷಿಗಳು. ಇಸ್ರಯೇಲಿನ ಮನೆತನವನ್ನು ವೃದ್ಧಿಗೊಳಿಸಿದ ರಾಹೆಲ್ ಮತ್ತು ಲೆಯಾ ಎಂಬ ಕುಲೀನೆಯರನ್ನು ಸರ್ವೇಶ್ವರ ಆಶೀರ್ವದಿಸಲಿ! ಎಫ್ರಾತ ಕುಲದಲ್ಲಿ ಧನವಂತನಾಗು;
12
ಬೆತ್ಲೆಹೇಮಿನಲ್ಲಿ ಘನವಂತನಾಗು! ಆ ಯುವತಿಯ ಮುಖಾಂತರ ಸರ್ವೇಶ್ವರ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆತನವು, ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆತನದಂತೆ ಪ್ರಖ್ಯಾತವಾಗಲಿ!” ಎಂದು ಹರಸಿದರು.
13
ಬೋವಜನು ರೂತಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋದನು. ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ಆಕೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು. ಊರಿನ ಮಹಿಳೆಯರು ನವೊಮಿಗೆ:
14
“ಸರ್ವೇಶ್ವರ ಸ್ವಾಮಿಗೆ ಸ್ತುತಿ ಸ್ತೋತ್ರ! ನಿನಗೊಬ್ಬ ವಂಶೋದ್ಧಾರಕನನ್ನು ಅನುಗ್ರಹಿಸಿದ ಇಸ್ರಯೇಲ್ ನಾಡಿನಲ್ಲಿ ಆ ಮಗು ಪ್ರಖ್ಯಾತನಾಗಲಿ!
15
ಅವನು ನಿನಗೆ ನವಚೈತನ್ಯವನ್ನು ಕೊಟ್ಟು ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಣೆಯನ್ನು ನೀಡುವನು. ಸಪ್ತಕುವರರಿಗಿಂತ ನಿನಗೆ ಮೆಚ್ಚುಗೆ ಆದ ನಿನ್ನ ಪ್ರಿಯ ಸೊಸೆ ಈ ಮಗುವನ್ನು ನಿನಗೆ ಕೊಟ್ಟಿದ್ದಾಳೆ!” ಎಂದು ಹರಸಿದರು.
16
ನವೊಮಿ ಆ ಮಗುವನ್ನು ಎತ್ತಿಕೊಂಡು ತನ್ನ ಮಡಿಲಲ್ಲಿಟ್ಟುಕೊಂಡು ಸಾಕಿ ಸಲಹಿದಳು.
17
ನೆರೆಹೊರೆಯ ಮಹಿಳೆಯರು, “ನವೊಮಿಗೆ ಕುಲಪುತ್ರನೊಬ್ಬನು ಹುಟ್ಟಿದ್ದಾನೆ!” ಎಂದು ಹೇಳಿ ಆ ಮಗುವಿಗೆ “ಓಬೇದ್” ಎಂದು ಹೆಸರಿಟ್ಟರು. ಇವನೇ ಜೆಸ್ಸೆಯ ತಂದೆ, ದಾವೀದನ ತಾತ.
18
ಪೆರೆಚನಿಂದ ದಾವೀದನವರೆಗಿನ ವಂಶಾವಳಿ: ಪೆರೆಚನಿಗೆ ಹೆಚ್ರೋನನು, ಹೆಚ್ರೋನನಿಗೆ ರಾಮನು, ರಾಮನಿಗೆ ಅಮಿನದಾಬನು ಹುಟ್ಟಿದರು. ಅಮಿನದಾಬನಿಗೆ ನಹಶೋನ, ನಹಶೋನನಿಗೆ ಸಲ್ಮೋನ್, ಸಲ್ಮೋನನಿಗೆ ಬೋವಜನು ಹುಟ್ಟಿದರು. ಬೋವಜನಿಗೆ ಓಬೇದ್, ಓಬೇದನಿಗೆ ಜೆಸ್ಸಯ, ಜೆಸ್ಸಯನಿಗೆ ದಾವೀದ ಹುಟ್ಟಿದರು.
← Chapter 3
Jump to:
Chapter 1
Chapter 2
Chapter 3
Chapter 4
All chapters:
1
2
3
4