bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Zephaniah 1
Zephaniah 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 2 →
1
ಅಮೋನನ ಮಗನು ಹಾಗೂ ಜುದೇಯದ ಅರಸನು ಆದ ಯೋಷೀಯನ ಕಾಲದಲ್ಲಿ ಸರ್ವೇಶ್ವರ ಜೆಫನ್ಯನಿಗೆ ಕೊಟ್ಟ ಸಂದೇಶವಿದು: (ಜೆಫನ್ಯನು ಕೂಷಿಯ ಮಗನು; ಕೂಷಿಯನು ಗೆದಲ್ಯನಿಗೆ, ಗೆದಲ್ಯನು ಅಮರ್ಯನಿಗೆ, ಅಮರ್ಯನು ಹಿಜ್ಕೀಯನಿಗೆ ಹುಟ್ಟಿದವರು).
2
ಸರ್ವೇಶ್ವರ ಇಂತೆಂದರು - “ನಾನು ಭೂಮಂಡಲದ ಮೇಲೆ ಏನೂ ಇಲ್ಲದಂತೆ ಸಮಸ್ತವನ್ನು ಅಳಿಸಿಬಿಡುವೆನು.
3
ಮನುಷ್ಯರು, ಮೃಗಗಳು, ಆಕಾಶದ ಪಕ್ಷಿಗಳು, ಸಮುದ್ರದ ಮೀನುಗಳು - ಇವೆಲ್ಲವನ್ನು ನಾಶಪಡಿಸುವೆನು. ದುರ್ಜನರು ಬಿದ್ದು ಸಾಯುವಂತೆ ಮಾಡುವೆನು; ನರಸಂತಾನವನ್ನು ಧರೆಯ ಮೇಲಿಂದ ಕಿತ್ತುಹಾಕುವೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
4
“ಜುದೇಯ ನಾಡನ್ನೂ ಜೆರುಸಲೇಮಿನ ನಿವಾಸಿಗಳೆಲ್ಲರನ್ನೂ ಕೈಯೆತ್ತಿ ಸದೆಬಡಿಯುವೆನು; ಬಾಳನ ಪೂಜೆಪುರಸ್ಕಾರಗಳ ಗುರುತೂ ಅಲ್ಲಿ ಇಲ್ಲದಂತೆ ಮಾಡುವೆನು. ಅವನ ಪೂಜಾರಿಗಳನ್ನು ನಿರ್ನಾಮಗೊಳಿಸುವೆನು;
5
ಮಾಳಿಗೆಗಳ ಮೇಲೆ ನಿಂತು ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆರಾಧಿಸುವವರನ್ನು ನಾಶಗೊಳಿಸುವೆನು; ಅಂತೆಯೇ ಸರ್ವೇಶ್ವರನ ಆರಾಧಕರೆಂದು ಪ್ರಮಾಣಮಾಡಿ, ಮಲ್ಕಾಮನ ಮೇಲೂ ಪ್ರಮಾಣ ಮಾಡುವವರನ್ನು ವಿನಾಶಗೊಳಿಸುವೆನು.
6
ನನಗೆ ಬೆನ್ನು ತೋರಿಸಿ, ನನ್ನ ದರ್ಶನವನ್ನು ಬಯಸದೆ, ನನ್ನ ಮಾರ್ಗಬಿಟ್ಟವರನ್ನು ಧ್ವಂಸಮಾಡುವೆನು.”
7
“ಸ್ವಾಮಿ ಸರ್ವೇಶ್ವರ ನ್ಯಾಯತೀರ್ಪು ನೀಡುವ ದಿನ ಸಮೀಪಿಸಿದೆ; ಆದುದರಿಂದ ಅವರ ಸನ್ನಿಧಿಯಲ್ಲಿ ಮೌನ ತಾಳಿರಿ. ಸರ್ವೇಶ್ವರ, ಯಜ್ಞದ ಔತಣವನ್ನು ಸಿದ್ಧಗೊಳಿಸಿದ್ದಾರೆ. ಅತಿಥಿಗಳನ್ನು ಪವಿತ್ರೀಕರಿಸಿದ್ದಾರೆ.
8
ಸ್ವಾಮಿಯ ಆ ಯಜ್ಞದ ದಿನದಂದು ನಾನು ದೇಶಾಧಿಪತಿಗಳನ್ನು, ರಾಜವಂಶದವರನ್ನು, ಹಾಗೂ ಅನ್ಯಮತೀಯ ವಸ್ತ್ರಧಾರಿಗಳನ್ನು ದಂಡಿಸುವೆನು.
9
ಹೊಸ್ತಿಲನ್ನು ದಾಟಿ ಮೋಸ, ವಂಚನೆ, ಹಿಂಸಾಚಾರಗಳಿಂದ ದೋಚಿದವುಗಳನ್ನು ತಂದು ತಮ್ಮ ದೇವರ ಮಂದಿರವನ್ನು ತುಂಬಿಸುವ ಎಲ್ಲರನ್ನೂ ಆ ದಿನದಂದು ನಾನು ದಂಡಿಸುವೆನು.
10
“ಆ ದಿನದಲ್ಲಿ ಜೆರುಸಲೇಮಿನಲ್ಲಿರುವ ಮೀನುಬಾಗಿಲಿನ ಬಳಿ ಕೂಗಾಟವನ್ನು, ಪಟ್ಟಣದ ಹೊಸ ಬಡಾವಣೆಯಲ್ಲಿ ಗೋಳಾಟವನ್ನು, ಹಾಗೂ ಬೆಟ್ಟಗುಡ್ಡಗಳಲ್ಲಿ ಭೀಕರ ಗದ್ದಲವನ್ನು ಕೇಳುವಿರಿ. ಇದು ಸರ್ವೇಶ್ವರಸ್ವಾಮಿಯ ನುಡಿ.
11
ಆಗ ಪಟ್ಟಣದ ಸಂತೆಬೀದಿಗಳಲ್ಲಿ ವಾಸಮಾಡುವವರು ಅತ್ತು ಪ್ರಲಾಪಿಸಲಿ; ವ್ಯಾಪಾರಸ್ಥರೆಲ್ಲರೂ ಸತ್ತುಹೋಗಿರುವರು; ಅಕ್ಕಸಾಲಿಗರೆಲ್ಲರೂ ಕಣ್ಮರೆಯಾಗಿರುವರು.
12
“ಆಗ ದೀಪವನ್ನು ಹಿಡಿದುಕೊಂಡು ಜೆರುಸಲೇಮನ್ನೆಲ್ಲಾ ಹುಡುಕಿಬಿಡುವೆನು. ‘ಸರ್ವೇಶ್ವರ ಮೇಲನ್ನಾಗಲಿ, ಕೇಡನ್ನಾಗಲಿ ಏನನ್ನೂ ಮಾಡುವುದಿಲ್ಲ’ ಎಂದುಕೊಳ್ಳುವ ಮದ್ಯದ ಮಡ್ಡಿಯಂಥ ಜಡ ಮನಸ್ಕರನ್ನು ದಂಡಿಸುವೆನು.
13
ಅವರ ಆಸ್ತಿಪಾಸ್ತಿಯೆಲ್ಲಾ ಸೂರೆಯಾಗುವುದು, ಅವರ ಮನೆಮಠಗಳು ಹಾಳಾಗುವುವು; ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು; ದ್ರಾಕ್ಷಾತೋಟಗಳನ್ನು ಬೆಳೆಸಿಕೊಂಡರೂ ಅವುಗಳಿಂದ ದ್ರಾಕ್ಷಾರಸವನ್ನು ಕುಡಿಯರು.”
14
ಸರ್ವೇಶ್ವರಸ್ವಾಮಿಯ ಮಹಾದಿನ ಹತ್ತಿರವಾಯಿತು; ಸಮೀಪಿಸಿತು. ಅದು ಬಹು ತ್ವರೆಯಾಗಿ ಬರುತ್ತಿದೆ; ಅದು ಕಠೋರವಾದ ದಿನ, ಆ ದಿನದ ಸುದ್ದಿ ಕಹಿಯಾದುದು, ಎಂಥಾ ಶೂರರನ್ನೂ ಕೂಡ ಘೋರವಾಗಿ ಗೋಳಾಡಿಸುವಂಥದ್ದು.
15
ಅದು ರೌದ್ರದ ದಿನ, ಕಷ್ಟ - ಸಂಕಟದ ದಿನ, ನಾಶವಿನಾಶದ ದಿನ, ಕತ್ತಲು ಕಾರ್ಗತ್ತಲ ದಿನ, ಕಾರ್ಮುಗಿಲು ಕವಿದ ಕರಾಳ ದಿನ;
16
ಕೋಟೆಕೊತ್ತಲಗಳನ್ನು, ಘನಗೋಪುರಗಳನ್ನು ಆಕ್ರಮಿಸಲು ಯುದ್ಧಕಹಳೆಯು ಮೊಳಗುವ ದಿನ, ಯುದ್ಧಘೋಷಣೆಗಳನ್ನು ಆರ್ಭಟಿಸುವ ದಿನ.
17
ಸರ್ವೇಶ್ವರ ಇಂತೆನ್ನುತ್ತಾರೆ, “ಮಾನವರ ಮೇಲೆ ಕಷ್ಟ - ಸಂಕಷ್ಟಗಳನ್ನು ಬರಮಾಡುವೆನು; ಅವರು ಕುರುಡರಂತೆ ತಡಕಾಡುವರು. ಏಕೆಂದರೆ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ; ಅವರ ರಕ್ತವನ್ನು ನೀರಿನಂತೆ ಚೆಲ್ಲಲಾಗುವುದು; ಅವರ ಹೆಣಗಳನ್ನು ಕಸದಂತೆ ಕೊಳೆಯಲು ಬಿಡಲಾಗುವುದು.”
18
ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.
Jump to:
Chapter 1
Chapter 2
Chapter 3
Chapter 2 →
All chapters:
1
2
3