bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Lamentations 1
Lamentations 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 2 →
1
ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕೂತು ಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಬಿಟ್ಟಿಯಾಳಾದಳು.
2
ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುವದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ; ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಗೆ ವಿುತ್ರರೆಲ್ಲಾ ಶತ್ರುಗಳಾಗಿ ದ್ರೋಹ ಮಾಡಿದ್ದಾರೆ,
3
ಯೆಹೂದವೆಂಬಾಕೆಯು ಘೋರ ಸೇವೆಶ್ರಮೆಗಳಿಂದ ತಪ್ಪಿಸಿಕೊಳ್ಳಬೇಕೆಂದು ವಲಸೆಹೋಗಿದ್ದಾಳೆ; ಮ್ಲೇಚ್ಫರ ಮಧ್ಯದಲ್ಲಿ ನೆಮ್ಮದಿಯಿಲ್ಲದೆ ವಾಸಮಾಡುತ್ತಾಳೆ; ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಹಿಂದಟ್ಟಿ ಹಿಡಿದರು.
4
ಯಾರೂ ಮಹೋತ್ಸವಗಳಿಗೆ ಬಾರದೆ ಇರುವದರಿಂದ ಚೀಯೋನಿಗೆ ಹೋಗುವ ದಾರಿಗಳು ಬಣಬಣ ಎನ್ನುತ್ತವೆ; ಅದರ ಬಾಗಿಲುಗಳೆಲ್ಲಾ ಹಾಳುಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಯುವತಿಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕಿಸುತ್ತದೆ.
5
ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಶಿರಸ್ಸಾದರು, ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಹಸುಮಕ್ಕಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ.
6
ಚೀಯೋನ್ ನಗರಿಯ ವ್ಯೆಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಅಟ್ಟುವವರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ.
7
ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ಭೋಗ್ಯ ವಸ್ತುಗಳನ್ನು ಜ್ಞಾಪಿಸಿಕೊಳ್ಳುತ್ತಾಳೆ; ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು.
8
ಆಕೆಯು ಪಾಪಮಾಡಿ ಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಬೆನ್ನಮರೆಯಲ್ಲಿ ನರಳಾಡುತ್ತಾಳೆ.
9
ಆಕೆಯ ನೆರಿಗೆಯು ಹೊಲಸಾಗಿತ್ತು, ಮುಂದಿನ ಗತಿಯೇನೆಂದು ಮನಸ್ಸಿಗೆ ತರಲಿಲ್ಲ; ಆದಕಾರಣ ವಿಪರೀತ ಹೀನಸ್ಥಿತಿಯಲ್ಲಿ ಬಿದ್ದು ಬಿಟ್ಟಳು; ಸಂತೈಸುವವರೇ ಇಲ್ಲ. ಯೆಹೋವನೇ, ನನ್ನ ಕಷ್ಟವನ್ನು ಲಕ್ಷಿಸು; ನನ್ನ ಶತ್ರು ಹೆಚ್ಚಳಪಡುತ್ತಾನಲ್ಲಾ [ಎಂದು ಮೊರೆಯಿಡುತ್ತಾಳೆ].
10
ವಿರೋಧಿಯು ಕೈಚಾಚಿ ಅವಳ ಭೋಗ್ಯ ವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; ಮ್ಲೇಚ್ಫರು ನಿನ್ನ ಸಭೆಗೆ ಸೇರಬಾರದು ಎಂದು ನೀನು ಆಜ್ಞಾಪಿಸಿದರೂ ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವದನ್ನು ಆಕೆಯು ಕಾಣಬೇಕಾಯಿತು.
11
ಆಕೆಯ ಜನರೆಲ್ಲಾ ನರಳುತ್ತಾರೆ, ಅವರು ಅನ್ನವನ್ನು ಹುಡುಕಿಕೊಳ್ಳುವ ಗತಿ ಬಂತು, ಪ್ರಾಣಾಧಾರವಾದ ಆಹಾರಕ್ಕಾಗಿ ತಮ್ಮ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಟ್ಟಿದ್ದಾರೆ, ಯೆಹೋವನೇ, ನೋಡು, ಕಟಾಕ್ಷಿಸು, ನಾನು ತುಚ್ಫಳಾದೆನಲ್ಲಾ [ಎಂದು ಪ್ರಲಾಪಿಸುತ್ತಾಳೆ].
12
ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿರೋಷಗೊಂಡು ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ.
13
ಆತನು ಮೇಲಣಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳಲ್ಲಿ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.
14
ಆತನ ಕೈ ನನ್ನ ದ್ರೋಹಗಳನ್ನು ನೊಗದ ಕಣ್ಣಿಗಳನ್ನೋ ಎಂಬಂತೆ ನನಗೆ ಬಿಗಿದಿದೆ. ಅವು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.
15
ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ತೃಣೀಕರಿಸಿದ್ದಾನೆ; ನನ್ನ ಯುವಕರನ್ನು ಭಂಗಪಡಿಸಬೇಕೆಂದು ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; ಕರ್ತನು ಯೆಹೂದವೆಂಬ ಯುವತಿಯನ್ನು ತೊಟ್ಟಿಯಲ್ಲಿನ ದ್ರಾಕ್ಷೆಯ ಹಾಗೆ ತುಳಿದಿದ್ದಾನೆ.
16
ಈ ವಿಪತ್ತುಗಳಿಂದ ಅಳುವೆನು, ನನ್ನನ್ನು ಸಂತೈಸಿ ದಣುವಾರಿಸತಕ್ಕವನು ದೂರವಾಗಿರುವದರಿಂದ ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು.
17
ಚೀಯೋನ್ ನಗರಿಯು ಕೈಚಾಚಿ ಅಂಗಲಾಚಿದರೂ ಯಾರೂ ಸಂತೈಸರು; ಯಾಕೋಬಿನ ನೆರೆಹೊರೆಯವರು ಅದಕ್ಕೆ ವಿರೋಧಿಗಳಾಗಿರಲಿ ಎಂದು ಯೆಹೋವನು ತೀರ್ಮಾನಿಸಿದ್ದಾನೆ; ಯೆರೂಸಲೇಮು ಅವರ ನಡುವೆ ಹೊಲೆಯಾಗಿ ಬಿದ್ದಿದೆ.
18
ಯೆಹೋವನು ನ್ಯಾಯಸ್ವರೂಪನು, ನಾನಾದರೋ ಆತನ ಆಜ್ಞೆಯನ್ನು ಮೀರಿದವಳು; ಜನಾಂಗಗಳೇ, ನೀವೆಲ್ಲರೂ ಕಿವಿಗೊಡಿರಿ, ನನ್ನ ವ್ಯಥೆಯನ್ನು ನೋಡಿರಿ; ನನ್ನ ಯುವತೀ ಯುವಕರು ಸೆರೆ ಹೋಗಿದ್ದಾರಲ್ಲಾ!
19
ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು, ನನ್ನ ಯಾಜಕರೂ ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು.
20
ಯೆಹೋವನೇ, ಕಟಾಕ್ಷಿಸು; ನಾನು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ, ನನ್ನ ಕರುಳು ಕುದಿಯುತ್ತದೆ. ನಾನು ಕೇವಲ ದ್ರೋಹಮಾಡಿದ್ದರಿಂದ ನನ್ನ ಹೃದಯವು ಮಗಚಿಕೊಂಡಿದೆ; ಮನೆಯ ಹೊರಗೆ ಸಂಹಾರ, ಒಳಗೆ ಪ್ರಾಣಸಂಕಟ.
21
ಯಾರೂ ನನ್ನನ್ನು ಸಂತೈಸರು; ನನ್ನ ನರಳಾಟದ ಸುದ್ದಿಯು ನನ್ನ ವೈರಿಗಳ ಕಿವಿಗೆ ಬಿದ್ದಿದೆ; ನನ್ನ ಶತ್ರುಗಳೆಲ್ಲಾ ನನಗಾದ ಕೇಡಿನ ಸಮಾಚಾರವನ್ನು ಕೇಳಿ ಅದನ್ನು ಮಾಡಿದವನು ನೀನೇ ಎಂದು ಉಲ್ಲಾಸಪಡುತ್ತಾರೆ. ನೀನು ಮುಂತಿಳಿಸಿದ ದಿನವನ್ನು ಬರಮಾಡುವಾಗ ನನಗಾದ ಗತಿಯು ಅವರಿಗೂ ಆಗಲಿ!
22
ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿದೆ.
Jump to:
Chapter 1
Chapter 2
Chapter 3
Chapter 4
Chapter 5
Chapter 2 →
All chapters:
1
2
3
4
5