bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Habakkuk 1
Habakkuk 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 2 →
1
ಪ್ರವಾದಿ ಹಬಕ್ಕೂಕನಿಗೆ ಪ್ರಕಟಿಸಲಾದ ದೈವೋಕ್ತಿ:
2
ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆ ಇಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ; ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ.
3
ಕೇಡನ್ನು ನಾ ನೋಡುವಂತೆ ಮಾಡಿದೆಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣ ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತಿದೆ.
4
ಜಡವಾಗಿಹೋಗಿದೆ ಧರ್ಮಶಾಸ್ತ್ರ; ಸ್ತಬ್ಧವಾಗಿದೆ ನ್ಯಾಯನೀತಿಯ ಚಕ್ರ. ಸಜ್ಜನರಿಗಿಂತ ದುರ್ಜನರ ಕೈ ಮೇಲಾಗಿದೆ; ಎಂದೇ ನ್ಯಾಯನೀತಿ ತಲೆಕೆಳಗಾಗಿದೆ.
5
ಆಗ ಸರ್ವೇಶ್ವರ ತಮ್ಮ ಜನರಿಗೆ ಇಂತೆಂದರು: “ಜನಾಂಗಗಳ ಮಧ್ಯೆ ನಡೆಯುವುದನ್ನು ನೋಡಿರಿ. ನೋಡಿದರೆ ಬೆಕ್ಕಸಬೆರಗಾಗುವಿರಿ. ನಿಮ್ಮ ಕಾಲದಲ್ಲೇ ನಾನೊಂದು ಕಾರ್ಯವನ್ನು ಮಾಡುವೆನು. ಅದನ್ನು ಕುರಿತು ನೀವು ಕಿವಿಯಾರೆ ಕೇಳಿದರೂ ನೀವು ನಂಬುವುದಿಲ್ಲ.
6
ಇಗೋ, ಬಾಬಿಲೋನಿನವರನ್ನು ಹುರಿದುಂಬಿಸಲಿದ್ದೇನೆ. ಅವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳು. ಅವರು ಜಗದ ಉದ್ದಗಲಕ್ಕೂ ಹರಡಿ ತಮ್ಮದಲ್ಲದ ನಾಡುಗಳನ್ನು ಆಕ್ರಮಿಸಿಕೊಳ್ಳಲು ಸಂಚರಿಸುವರು.
7
ಅವರು ಕ್ರೂರಿಗಳು, ಭಯಂಕರರು. ತಮ್ಮದೇ ಆದ ನ್ಯಾಯನೀತಿಯನ್ನು ರೂಪಿಸಿಕೊಳ್ಳುವಂಥವರು; ತಮ್ಮನ್ನು ತಾವೇ ಗೌರವಿಸಿಕೊಳ್ಳುವ ಅಹಂಭಾವಿಗಳು.
8
“ಅವರ ಕುದುರೆಗಳು ಚಿರತೆಗಳಿಗಿಂತ ಬಿರುಸು; ಹಸಿದ ತೋಳಗಳಿಗಿಂತ ಚುರುಕು. ಅವರ ರಾಹುತರು ರಭಸದಿಂದ ಹಾರಿಬರುವರು. ಬೇಟೆಯನ್ನು ಕಬಳಿಸಲು ಕಾತರದಿಂದ ಹಾರುವ ರಣಹದ್ದಿನಂತೆ ದೂರದಿಂದ ಧಾವಿಸಿಬರುವರು.
9
ಹಿಂಸೆ ಬಾಧೆಯನ್ನು ಗುರಿಯಾಗಿ ಇಟ್ಟುಕೊಂಡೇ ಮುನ್ನುಗ್ಗಿಬರುವರು. ಮರಳಿನ ಕಣಗಳಂತೆ ಲೆಕ್ಕವಿಲ್ಲದಷ್ಟು ಜನರನ್ನು ಸೆರೆ ಹಿಡಿಯುವರು.
10
“ಅವರು ಅರಸರನ್ನು ಅಪಹಾಸ್ಯಮಾಡುವರು; ಅಧಿಪತಿಗಳನ್ನು ಪರಿಹಾಸ್ಯಕ್ಕೆ ಗುರಿಮಾಡುವರು. ಕೋಟೆಗಳನ್ನು ಧೂಳೀಪಟ ಮಾಡುವರು. ಮಣ್ಣುಗುಡ್ಡೆ ಹಾಕಿ ಆಕ್ರಮಿಸಿಕೊಳ್ಳುವರು.
11
ಬಿರುಗಾಳಿಯಂತೆ ಬಂದು ಮಾಯವಾಗುವವರು ಅವರು; ಸ್ವಂತ ಶಕ್ತಿಯೇ ದೈವ ಎಂದೆಣಿಸುವಂಥ ಅಪರಾಧಿಗಳು.”
12
ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ.
13
ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಸ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ?
14
ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ?
15
ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ.
16
ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ.
17
ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶಮಾಡುತ್ತಿರಬೇಕೋ?
Jump to:
Chapter 1
Chapter 2
Chapter 3
Chapter 2 →
All chapters:
1
2
3