bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Esther 3
Esther 3
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 4 →
1
ಇದಾದನಂತರ ಅರಸನಾದ ಅಹಷ್ವೇರೋಷನು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಪದವಿಯಲ್ಲಿ ಹೆಚ್ಚಿಸಿ ಅವನಿಗೆ ದೊಡ್ಡ ಅಧಿಕಾರವನ್ನು ಕೊಟ್ಟು ತನ್ನ ಒಡ್ಡೋಲಗದ ಎಲ್ಲಾ ಸರದಾರರಲ್ಲಿ ಅವನಿಗೆ ಪ್ರಥಮಾಸನವನ್ನು ಅನುಗ್ರಹಿಸಿದನು.
2
ಅರಸನು - ರಾಜನಿವೇಶನದಲ್ಲಿರುವ ರಾಜಸೇವಕರೆಲ್ಲರೂ ಹಾಮಾನನಿಗೆ ಸಾಷ್ಟಾಂಗ ನಮಸ್ಕಾರಮಾಡಬೇಕೆಂದು ಅಪ್ಪಣೆಮಾಡಿದ್ದರಿಂದ ಎಲ್ಲರೂ ಹಾಗೆ ಮಾಡುತ್ತಿದ್ದರು; ಆದರೆ ಮೊರ್ದೆಕೈಯು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಲಿಲ್ಲ.
3
ರಾಜಗೃಹನಿವೇಶನದಲ್ಲಿದ್ದ ರಾಜಸೇವಕರು - ನೀನು ರಾಜಾಜ್ಞೆಯನ್ನು ಮೀರುವದೇಕೆ ಎಂದು ಹೇಳಿ
4
ದಿನಂಪ್ರತಿ ಅವನನ್ನು ಎಚ್ಚರಿಸಿದರೂ ಅವನು ಮಣಿಯಲಿಲ್ಲ. ಆದದರಿಂದ ಅವರು - ತಾನು ಯೆಹೂದ್ಯನೆನ್ನುವ ಮೊರ್ದೆಕೈಯ ಹೆಮ್ಮೆಯ ಹಟವು ಸಾಗುವದೇನೋ ನೋಡೋಣ ಎಂದುಕೊಂಡು ಅದನ್ನು ಹಾಮಾನನಿಗೆ ತಿಳಿಸಿದರು.
5
ಮೊರ್ದೆಕೈಯು ತನಗೆ ಸಾಷ್ಟಾಂಗನಮಸ್ಕಾರ ಮಾಡುವದಿಲ್ಲವೆಂದು ಹಾಮಾನನು ನೋಡಿ ಬಹು ಕೋಪವುಳ್ಳವನಾದನು.
6
ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವದು ಸಾಲದೆಂದೆಣಿಸಿ ಇವನು ಯೆಹೂದಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಗಳನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು.
7
ಅರಸನಾದ ಅಹಷ್ವೇರೋಷನ [ಆಳಿಕೆಯ] ಹನ್ನೆರಡನೆಯ ವರುಷದ ಮೊದಲನೆಯ ತಿಂಗಳಾದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿವಸವೂ ಯಾವವೆಂದು ತಿಳಿದುಕೊಳ್ಳುವದಕ್ಕೆ ಪೂರನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆಯ ತಿಂಗಳಾದ ಫಾಲ್ಗುನಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
8
ಹಾಮಾನನು ಅರಸನಾದ ಅಹಷ್ವೇರೋಷನಿಗೆ - ನಿನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗವಿರುತ್ತದೆ; ಅದು ಇತರ ಜನಾಂಗಗಳವರ ಮಧ್ಯದಲ್ಲಿ ಹರಡಿದ್ದರೂ ಅವರಿಂದ ಪ್ರತ್ಯೇಕವಾಗಿಯೇ ಇರುತ್ತದೆ. ಆ ಜನಾಂಗದವರ ನಿಯಮಗಳು ಇತರ ಎಲ್ಲಾ ಜನಾಂಗಗಳವರ ನಿಯಮಗಳಿಗೆ ಬೇರೆಯಾಗಿರುತ್ತವೆ. ಅರಸನ ನಿಯಮಗಳನ್ನಂತೂ ಅವರು ಅನುಸರಿಸುವದೇ ಇಲ್ಲ. ಅರಸನು ಅವರನ್ನು ಸುಮ್ಮನೆ ಬಿಡುವದು ಉಚಿತವಲ್ಲ.
9
ಅರಸನ ಚಿತ್ತ ಬಂದರೆ ಅವರನ್ನು ಸಂಹರಿಸಬೇಕು ಎಂಬ ರಾಯಸವು ಹೊರಡಲಿ; ಹಾಗೆ ಮಾಡಿದರೆ ನಾನು ರಾಜ ಭಂಡಾರಗಳಿಗೆ ಸೇರಿಸುವದಕ್ಕೋಸ್ಕರ ಹತ್ತು ಸಾವಿರ ತಲಾಂತು ಬೆಳ್ಳಿಯನ್ನು ತೂಕ ಮಾಡಿ ಉದ್ಯೋಗಸ್ಥರ ಕೈಗೆ ಒಪ್ಪಿಸುವೆನು ಎಂದು ಹೇಳಿದನು.
10
ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಯುಂಗುರವನ್ನು ತೆಗೆದು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಯೆಹೂದದ್ವೇಷಿಯೂ ಆದ ಹಾಮಾನನಿಗೆ ಒಪ್ಪಿಸಿ ಅವನಿಗೆ -
11
ಆ ಬೆಳ್ಳಿ ನಿನ್ನಲ್ಲೇ ಇರಲಿ; ನೀನು ಆ ಜನರನ್ನು ಏನು ಬೇಕಾದರೂ ಮಾಡಬಹುದು ಎಂದು ಹೇಳಿದನು.
12
ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯೂ ಇತ್ತು.
13
ಪತ್ರಗಳು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳುಹಿಸಲ್ಪಟ್ಟವು. ಅವುಗಳಲ್ಲಿ - ಒಂದೇ ದಿನದಲ್ಲಿ ಅಂದರೆ ಹನ್ನೆರಡನೆಯ ತಿಂಗಳಾದ ಫಾಲ್ಗುನ ಮಾಸದ ಹದಿಮೂರನೆಯ ದಿನದಲ್ಲಿ ಹುಡುಗರು, ಮುದುಕರು, ಹೆಂಗಸರು, ಮಕ್ಕಳು ಎಂದು ನೋಡದೆ ಎಲ್ಲಾ ಯೆಹೂದ್ಯರನ್ನು ಕೊಲ್ಲಿರಿ, ಸಂಹರಿಸಿರಿ, ನಿರ್ನಾಮಗೊಳಿಸಿರಿ, ಅವರ ಸೊತ್ತನ್ನು ಸೂರೆಮಾಡಿರಿ ಎಂದೂ
14
ಎಲ್ಲರೂ ಆ ದಿನದಲ್ಲಿ ಸಿದ್ಧರಾಗಿರುವ ಹಾಗೆ ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿಯೂ ಪ್ರಕಟಿಸಲ್ಪಡಬೇಕು ಎಂದೂ ಬರೆದಿತ್ತು.
15
ಈ ನಿರ್ಣಯವು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ರಾಜಾಜ್ಞೆಯ ಮೇರೆಗೆ ಶೀಘ್ರವಾಗಿ ಹೊರಟರು. ಅರಸನಾದರೋ ಹಾಮಾನನೊಡನೆ ಸುರಾಪಾನ ಮಾಡುವದಕ್ಕೆ ಕೂತುಕೊಂಡನು. ಅತ್ತ ಶೂಷನ್ ಪಟ್ಟಣದಲ್ಲಿ ತಳಮಳ ಉಂಟಾಯಿತು.
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 4 →
All chapters:
1
2
3
4
5
6
7
8
9
10