bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Nehemiah 9
Nehemiah 9
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 10 →
1
ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರಾಯೇಲ್ಯರು ಉಪವಾಸವಾಗಿದ್ದು ಗೋಣೀತಟ್ಟನ್ನು ಕಟ್ಟಿಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು ನೆರೆದು ಬಂದರು.
2
ಇಸ್ರಾಯೇಲ್ಸಂತಾನದವರು ಎಲ್ಲಾ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡು ನಿಂತು ತಮ್ಮ ಪಾಪಗಳನ್ನೂ ತಮ್ಮ ಪಿತೃಗಳ ಪಾಪಗಳನ್ನೂ ಆತನಿಗೆ ಅರಿಕೆಮಾಡಿದರು.
3
ಅವರು ಮೂರು ತಾಸುಗಳವರೆಗೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು ತಮ್ಮ ದೇವರಾದ ಯೆಹೋವನ ಧರ್ಮಶಾಸ್ತ್ರ ಗ್ರಂಥವನ್ನು ಪಾರಾಯಣ ಮಾಡಿಸಿದರು. ತರುವಾಯ ಇನ್ನೂ ಮೂರು ತಾಸು ತಮ್ಮ ದೇವರಾದ ಯೆಹೋವನಿಗೆ ಅಡ್ಡ ಬಿದ್ದು ಪಾಪಗಳನ್ನು ಅರಿಕೆಮಾಡಿದರು.
4
ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ, ಕೆನಾನೀ ಎಂಬವರು ಲೇವಿಯರ ಮೆಟ್ಲುಗಳ ಮೇಲೆ ನಿಂತು ಮಹಾಶಬ್ದದಿಂದ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು.
5
ಆಮೇಲೆ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು - ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವಾಗಲಿ ಅನ್ನಿರಿ ಎಂದು ಹೇಳಿ - ಯೆಹೋವನೇ, ಸರ್ವಸ್ತುತಿಕೀರ್ತನೆಗಳಿಗೆ ವಿುಗಿಲಾಗಿರುವ ನಿನ್ನ ಮಹಾನಾಮಕ್ಕೆ ಕೊಂಡಾಟವಾಗಲಿ,
6
ನೀನೊಬ್ಬನೇ ದೇವರು; ನೀನು ಉನ್ನತೋನ್ನತವಾದ ಆಕಾಶವನ್ನೂ ಅದರ ಸೈನ್ಯವನ್ನೂ ಭೂವಿುಯನ್ನೂ ಅದರ ಮೇಲಿರುವದನ್ನೂ ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟು ಮಾಡಿ ಸಮಸ್ತ ಪ್ರಾಣಿಗಳ ಜೀವಾಧಾರನಾಗಿರುತ್ತೀ.
7
ಆಕಾಶ ಸೈನ್ಯದವರು ನಿನಗೆ ಅಡ್ಡಬೀಳುತ್ತಾರೆ. ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.
8
ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ - ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಯೆಬೂಸಿಯರು, ಗಿರ್ಗಾಷಿಯರು ಇವರ ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದೀ; ನೀನು ಧರ್ಮಸ್ವರೂಪನೇ.
9
ಐಗುಪ್ತದೇಶದಲ್ಲಿ ನಮ್ಮ ಪಿತೃಗಳಿಗಿದ್ದ ಕಷ್ಟವನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಲಾಲಿಸಿದಿ.
10
ಐಗುಪ್ತ್ಯರು ಗರ್ವಿಗಳಾಗಿ ಅವರನ್ನು ಕುಗ್ಗಿಸಿದಾಗ ನೀನು ಫರೋಹನಲ್ಲಿಯೂ ಅವನ ಸೇವಕರಲ್ಲಿಯೂ ಅವನ ದೇಶದ ಜನರಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡಿಸಿ ಈಗ ನಿನಗಿರುವ ಕೀರ್ತಿಯನ್ನು ಸ್ಥಾಪಿಸಿದಿ.
11
ನಮ್ಮ ಪಿತೃಗಳು ಸಮುದ್ರ ಮಧ್ಯದಲ್ಲಿ ಒಣನೆಲದಲ್ಲೇ ಹಾದುಹೋಗುವಂತೆ ಅವರ ಮುಂದೆ ಸಮುದ್ರವನ್ನು ಭೇದಿಸಿದಿ. ಅವರನ್ನು ಹಿಂದಟ್ಟುವವರನ್ನು ಕಲ್ಲಿನಂತೆ ಮಹಾಜಲರಾಶಿಯ ತಳದಲ್ಲಿ ಮುಳುಗಿಸಿ ಬಿಟ್ಟಿ.
12
ಹಗಲುಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ ರಾತ್ರಿವೇಳೆಯಲ್ಲಿ ಅವರು ನಡೆಯ ತಕ್ಕ ದಾರಿಯಲ್ಲಿ ಬೆಳಕುಕೊಡುವದಕ್ಕೆ ಅಗ್ನಿ ಸ್ತಂಭದಲ್ಲಿಯೂ ಅವರ ಮುಂದೆ ಹೋದಿ.
13
ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶದ ಕಡೆಯಿಂದ ಅವರೊಡನೆ ಮಾತಾಡಿ ಅವರಿಗೆ ನೀತಿನಿಯಮಗಳನ್ನೂ ಯಥಾರ್ಥ ಧರ್ಮೋಪದೇಶವನ್ನೂ ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದಿ.
14
ನಿನ್ನ ಸೇವಕನಾದ ಮೋಶೆಯ ಮುಖಾಂತರ ನಿನಗೆ ಮೀಸಲಾದ ಸಬ್ಬತೆಂಬ ವಿಶ್ರಾಂತಿ ದಿನವನ್ನು ಅವರಿಗೆ ಪ್ರಕಟಿಸಿ ಆಜ್ಞಾವಿಧಿಧರ್ಮಗಳನ್ನು ಕಲಿಸಿದಿ.
15
ಅವರು ಹಸಿದಾಗ ಆಕಾಶದಿಂದ ಆಹಾರವನ್ನು ಕೊಟ್ಟು ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದಿ.
16
ಆದರೂ ನಮ್ಮ ಪಿತೃಗಳು ಗರ್ವಿಗಳಾಗಿ ಹಟಹಿಡಿದು ನಿನ್ನ ಆಜ್ಞೆಗಳಿಗೆ ಅವಿಧೇಯರಾದರು.
17
ನೀನು ಅವರ ಮಧ್ಯದಲ್ಲಿ ಮಾಡಿದ ಮಹತ್ಕಾರ್ಯಗಳನ್ನು ಅವರು ಮರೆತು ಮಾತುಕೇಳದೆ ಹಟಹಿಡಿದು ತಮಗೊಬ್ಬ ನಾಯಕನನ್ನು ನೇವಿುಸಿಕೊಂಡು ಮುಂಚಿನಂತೆ ದಾಸರಾಗಿರುವದಕ್ಕಾಗಿ ಐಗುಪ್ತಕ್ಕೆ ಹಿಂದಿರುಗಬೇಕೆಂದಿದ್ದರು. ನೀನಾದರೋ ಪಾಪಗಳನ್ನು ಕ್ಷವಿುಸುವವನೂ ಕನಿಕರದಯೆಗಳುಳ್ಳವನೂ ದೀರ್ಘಶಾಂತನೂ ಕೃಪಾಳುವೂ ಆಗಿರುವ ದೇವರು; ನೀನು ಅವರನ್ನು ಕೈಬಿಡಲಿಲ್ಲ.
18
ಅವರು ತಮಗೆ ಎರಕದ ಬಸವನನ್ನು ಮಾಡಿಕೊಂಡು - [ಇಸ್ರಾಯೇಲ್ಯರೇ,] ನಿಮ್ಮನ್ನು ಐಗುಪ್ತದಿಂದ ಕರಕೊಂಡು ಬಂದ ದೇವರು ಇದೇ ಎಂದು ಹೇಳಿ ನಿನ್ನನ್ನು ಅಸಡ್ಡೆ ಮಾಡಿದಾಗಲೂ
19
ಕರುಣಾನಿಧಿಯಾದ ನೀನು ಅವರನ್ನು ಅರಣ್ಯದಲ್ಲಿ ಕೈಬಿಡಲಿಲ್ಲ, ಹಗಲಿನಲ್ಲಿ ಅವರಿಗೆ ದಾರಿ ತೋರಿಸುತ್ತಿದ್ದ ಮೇಘ ಸ್ತಂಭವೂ ರಾತ್ರಿವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕು ಕೊಡುತ್ತಿದ್ದ ಅಗ್ನಿಸ್ತಂಭವೂ ಅವರನ್ನು ಬಿಟ್ಟುಹೋಗಲಿಲ್ಲ.
20
ಅವರಿಗೆ ಉಪದೇಶಿಸಲು ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ.
21
ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟಿ. ನಾಲ್ವತ್ತು ವರುಷ ಅವರನ್ನು ಅರಣ್ಯದಲ್ಲಿ ಸಾಕುತ್ತಾ ಇದ್ದಿ; ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ಬಟ್ಟೆಗಳು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ.
22
ರಾಜ್ಯಜನಾಂಗಗಳನ್ನು ಅವರಿಗೆ ವಶಪಡಿಸಿ ಆ ರಾಜ್ಯಗಳನ್ನು ಅವರಿಗೆ ಸ್ವಾಸ್ತ್ಯವನ್ನಾಗಿ ಹಂಚಿಕೊಟ್ಟಿ. ಹೀಗೆ ಅವರು ಹೆಷ್ಬೋನಿನ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡರು.
23
ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳಷ್ಟು ಹೆಚ್ಚಿಸಿ - ನೀವು ಈ ದೇಶದೊಳಕ್ಕೆ ಪ್ರವೇಶಿಸಿ ಸ್ವಾಧೀನ ಮಾಡಿಕೊಳ್ಳುವಿರಿ ಎಂದು ಅವರ ಪಿತೃಗಳಿಗೆ ವಾಗ್ದಾನಮಾಡಿದ್ದ ದೇಶಕ್ಕೆ ಅವರನ್ನು ಬರಮಾಡಿದಿ.
24
ಅವರು ಆ ದೇಶದಲ್ಲಿ ಸೇರಿ ಅದನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶನಿವಾಸಿಗಳಾಗಿದ್ದ ಕಾನಾನ್ಯರನ್ನು ಕುಗ್ಗಿಸಿ ಮನಸ್ಸಿಗೆ ಬಂದಂತೆ ನಡಿಸುವ ಹಾಗೆ ಆ ದೇಶದ ರಾಜರನ್ನೂ ಪ್ರಜೆಗಳನ್ನೂ ಅವರ ಕೈಗೆ ಒಪ್ಪಿಸಿದಿ.
25
ಅವರು ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸಾರವುಳ್ಳ ಭೂವಿುಯನ್ನೂ ಸಮಸ್ತ ವಿಧವಾದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇತೋಟ, ಎಣ್ಣೇಮರಗಳ ತೋಪು, ಎಷ್ಟೋ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು ತೃಪ್ತರಾಗಿ ಕೊಬ್ಬಿ ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು.
26
ಆಗ ಅವರು ನಿನಗೆ ಅವಿಧೇಯರಾಗಿ ತಿರುಗಿ ಬಿದ್ದು ನಿನ್ನ ಧರ್ಮೋಪದೇಶವನ್ನು ಉಲ್ಲಂಘಿಸಿ ತಮ್ಮನ್ನು ಎಚ್ಚರಿಸುವದಕ್ಕೂ ನಿನ್ನ ಕಡೆಗೆ ತಿರುಗಿಸುವದಕ್ಕೂ ಪ್ರಯತ್ನಿಸುತ್ತಿದ್ದ ನಿನ್ನ ಪ್ರವಾದಿಗಳನ್ನು ಕೊಂದುಹಾಕಿ ನಿನ್ನನ್ನು ಅಸಡ್ಡೆಮಾಡಿದರು.
27
ಆದದರಿಂದ ನೀನು ಅವರನ್ನು ಬಾಧಿಸುವ ವಿರೋಧಿಗಳ ಕೈಗೆ ಒಪ್ಪಿಸಿದಿ. ಅವರು ಆ ಕಷ್ಟಕಾಲದಲ್ಲಿ ನಿನಗೆ ಮೊರೆಯಿಡಲು ಪರಲೋಕದಿಂದ ನೀನು ಅವರಿಗೆ ಕಿವಿಗೊಟ್ಟು ನಿನ್ನ ಕರುಣಾತಿಶಯದಿಂದ ರಕ್ಷಕರನ್ನು ಕಳುಹಿಸಿ ವಿರೋಧಿಗಳ ಕೈಯಿಂದ ಅವರನ್ನು ಬಿಡಿಸಿದಿ.
28
ಉಪಶಮನವನ್ನು ಪಡೆದ ಮೇಲೆ ಅವರು ತಿರಿಗಿ ದ್ರೋಹಿಗಳಾಗಿ ನಡೆಯುತ್ತಿರುವದನ್ನು ನೀನು ಕಂಡು ಅವರ ಮೇಲೆ ದೊರೆತನ ನಡಿಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದಿ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿ -
29
ನನ್ನ ಧರ್ಮೋಪದೇಶಕ್ಕೆ ಪುನಃ ಮನಗೊಟ್ಟು ಬನ್ನಿರಿ ಎಂದು ಎಷ್ಟೋ ಖಂಡಿತವಾಗಿ ಎಚ್ಚರಿಸಿದಿ. ಆದರೂ ಅವರು ಲಾಲಿಸದೆ ಗರ್ವಿಗಳೂ ನಿನ್ನ ಆಜ್ಞೆಗಳಿಗೆ ಅವಿಧೇಯರೂ ಆದರು; ಕೈಕೊಳ್ಳುವ ಮನುಷ್ಯನಿಗೆ ಜೀವಾಧಾರವಾಗಿರುವ ನಿನ್ನ ವಿಧಿ ನ್ಯಾಯಗಳನ್ನು ಮೀರಿ ಪಾಪಮಾಡಿ ಹೆಗಲು ಕೊಡದೆ ಮೊಂಡಬಿದ್ದು ನಿನ್ನ ಮಾತನ್ನು ಕೇಳದೆ ಹೋದರು.
30
ನೀನು ಅನೇಕವರ್ಷಗಳ ತನಕ ಅವರ ವಿಷಯದಲ್ಲಿ ತಾಳಿಕೊಂಡು ಪ್ರವಾದಿಗಳ ಮುಖಾಂತರ ಮಾತಾಡುತ್ತಿದ್ದ ನಿನ್ನ ಆತ್ಮನಿಂದ ಅವರನ್ನು ಎಷ್ಟು ಎಚ್ಚರಿಸುತ್ತಿದ್ದರೂ ಅವರು ಕಿವಿಗೊಡದೆ ಹೋದ ಮೇಲೆ ನೀನು ಅವರನ್ನು ಅನ್ಯದೇಶಗಳವರ ಕೈಗೆ ಒಪ್ಪಿಸಿಬಿಟ್ಟಿ.
31
ಆದರೆ ನೀನು ದಯೆಯೂ ಕನಿಕರವೂ ಉಳ್ಳ ದೇವರಾಗಿರುವದರಿಂದ ನಿನ್ನ ಮಹಾ ಕೃಪಾನುಸಾರವಾಗಿ ಅವರನ್ನು ನಾಶಮಾಡಿಬಿಡಲಿಲ್ಲ, ಕೈಬಿಡಲೂ ಇಲ್ಲ.
32
ನಮ್ಮ ದೇವರೇ, ಮಹೋನ್ನತನೂ ಪರಾಕ್ರವಿುಯೂ ಭಯಂಕರನೂ ಆಗಿರುವಾತನೇ, ಕೃಪಾವಾಗ್ದಾನಗಳನ್ನು ನೆರವೇರಿಸುವ ದೇವರೇ, ಅಶ್ಶೂರದ ರಾಜರ ಕಾಲದಿಂದ ಇಂದಿನವರೆಗೆ ನಮ್ಮ ಅರಸರಿಗೂ ಪ್ರಭುಗಳಿಗೂ ಯಾಜಕರಿಗೂ ಪ್ರವಾದಿಗಳಿಗೂ ಹಿರಿಯರಿಗೂ ನಿನ್ನ ಎಲ್ಲಾ ಪ್ರಜೆಗಳಿಗೂ ಪ್ರಾಪ್ತವಾದ ಕಷ್ಟವು ಅಲ್ಪವು ಎಂದೆಣಿಸಬೇಡ.
33
ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ಧರ್ಮಸ್ವರೂಪನೇ; ನೀನು ಸತ್ಯವನ್ನೇ ನಡಿಸಿದಿ, ನಾವಾದರೋ ದುಷ್ಟರು.
34
ನಮ್ಮ ಅರಸರೂ ಪ್ರಭುಗಳೂ ಯಾಜಕರೂ ಹಿರಿಯರೂ ನಿನ್ನ ಧರ್ಮೋಪದೇಶವನ್ನು ಅನುಸರಿಸಲಿಲ್ಲ, ನಿನ್ನ ಆಜ್ಞೆಗಳಿಗೆ ಕಿವಿಗೊಡಲಿಲ್ಲ; ನೀನು ಎಚ್ಚರಿಸಿ ಹೇಳಿದ ಮಾತುಗಳನ್ನು ಲಕ್ಷಿಸಲಿಲ್ಲ.
35
ಅವರು ಸ್ವರಾಜ್ಯದಲ್ಲಿದ್ದುಕೊಂಡು ನೀನು ದಯಪಾಲಿಸಿದ ಸಮೃದ್ಧಿಯನ್ನು ಅನುಭವಿಸುತ್ತಾ ನಿನ್ನ ಅನುಗ್ರಹದಿಂದ ದೊರಕಿದ ಸಾರವುಳ್ಳ ವಿಸ್ತಾರದೇಶದಲ್ಲಿ ವಾಸಿಸುತ್ತಾ ಇರುವಾಗ ನಿನ್ನನ್ನು ಸೇವಿಸದೆಯೂ ತಮ್ಮ ದುಷ್ಕೃತ್ಯಗಳನ್ನು ಬಿಡದೆಯೂ ಇದ್ದದರಿಂದಲೇ ನಾವು ಈಗ ದಾಸರಾಗಿದ್ದೇವೆ.
36
ನೀನು ನಮ್ಮ ಪಿತೃಗಳಿಗೆ - ಇದರ ಉತ್ಪನ್ನವನ್ನೂ ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿದೆ. ನಮ್ಮ ಪಾಪಗಳ ನಿವಿುತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇವಿುಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತದೆ.
37
ನಮ್ಮ ಕಾಯಗಳ ಮೇಲೆಯೂ ಪಶುಗಳ ಮೇಲೆಯೂ ಅವರು ಅಧಿಕಾರ ನಡಿಸುತ್ತಾರೆ. ನಾವು ಮಹಾಸಂಕಟದಲ್ಲಿರುತ್ತೇವೆ ಅಯ್ಯೋ ಎಂದು ಪ್ರಾರ್ಥಿಸಿದರು.
38
ಈ ಎಲ್ಲಾ ಕಾರಣಗಳಿಂದ ನಾವು ಲೇಖನ ರೂಪವಾದ ಪ್ರತಿಜ್ಞೆಯನ್ನು ಮಾಡಿದೆವು. ಅದಕ್ಕೆ ನಮ್ಮ ಪ್ರಭುಗಳೂ ಲೇವಿಯರೂ ಯಾಜಕರೂ ಸಹಿಮಾಡಿ ಮುದ್ರೆಹಾಕಿದರು.
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 10 →
All chapters:
1
2
3
4
5
6
7
8
9
10
11
12
13